ತ್ರಿವಳಿ ತಲಾಖ್ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಗೆ ಬಿಟ್ಟದ್ದು: ಎಚ್.ಡಿ.ದೇವೇಗೌಡ

Update: 2017-08-22 14:14 GMT

ಗದಗ, ಆ.22: ಮುಸ್ಲಿಮ್ ಸಮುದಾಯದಲ್ಲಿ ಆಚರಣೆಯಲ್ಲಿರುವ ತ್ರಿವಳಿ ತಲಾಖ್ ಪದ್ಧತಿಯು ಧಾರ್ಮಿಕ ವಿವಾದವಾಗಿದೆ. ಅದನ್ನು ನಾವು ಪ್ರಶ್ನಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತ್ರಿವಳಿ ತಲಾಖ್ ಕುರಿತು ಮುಸ್ಲಿಮರ ಪವಿತ್ರ ಧಾರ್ಮಿಕ ಗ್ರಂಥ ಕುರ್‌ ಆನ್‌ನಲ್ಲಿ ಪ್ರಸ್ತಾಪವಾಗಿಲ್ಲ. ಕೆಲವು ಧಾರ್ಮಿಕ ಮುಖಂಡರು ಇದನ್ನು ಜಾರಿಗೆ ತಂದಿದ್ದಾರೆಂದು ಹೇಳಲಾಗುತ್ತಿದೆ. ತ್ರಿವಳಿ ತಲಾಖ್ ವಿಚಾರದಲ್ಲಿ ಸುಪ್ರೀಂಕೋರ್ಟ್ ಈಗಾಗಲೇ ತೀರ್ಪು ನೀಡಿದೆ. ಈ ಬಗ್ಗೆ ಅಂತಿಮ ತೀರ್ಮಾನವನ್ನು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಹಾಗೂ ಧಾರ್ಮಿಕ ಮುಖಂಡರಿಗೆ ಬಿಟ್ಟದ್ದು ಎಂದು ಹೇಳಿದರು.

ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮ ವಿವಾದದ ಬಗ್ಗೆ ನನಗೆ ಸಾಕಾಗಿ ಹೋಗಿದೆ. ನನ್ನನ್ನು ಲಿಂಗಾಯತ ವಿರೋಧಿ ಎಂದು ಕೆಲವರು ಹಣೆಪಟ್ಟಿ ಕಟ್ಟಿದ್ದರು. ಆ ರೀತಿಯ ಹಣೆಪಟ್ಟಿಯನ್ನು ಕಟ್ಟಿದವರು ಯಾರೆಂದು ನನಗೆ ಗೊತ್ತು ಎಂದ ಅವರು, ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ತೀರ್ಮಾನ ಕೈಗೊಳ್ಳಲು ದೊಡ್ಡ ದೊಡ್ಡ ಪೀಠಗಳಿವೆ. ಈ ವಿಚಾರದಲ್ಲಿ ಧಾರ್ಮಿಕ ಮುಖಂಡರು ಕೈಗೊಳ್ಳುವ ನಿರ್ಧಾರಕ್ಕೆ ನಾನು ತಲೆಬಾಗುತ್ತೇನೆ ಎಂದರು.

ಹೊಂದಾಣಿಕೆ ಇಲ್ಲ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಜೊತೆ ಯಾವುದೇ ರೀತಿಯ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಈ ಚುನಾವಣೆಯಿಂದ ಹೊಂದಾಣಿಕೆ ರಾಜಕೀಯಕ್ಕೆ ಇತಿಶ್ರೀ ಹಾಡಲಾಗುವುದು ಎಂದು ಅವರು ಹೇಳಿದರು.

ಸಿ-ಫೋರ್ ಸಮೀಕ್ಷೆಯ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಪಕ್ಷವನ್ನು ಸಂಘಟನೆ ಮಾಡಲು ರಾಜ್ಯಾದ್ಯಂತ ಸಂಚರಿಸುತ್ತಿದ್ದೇನೆ. ರಾಜ್ಯದ ಹಿತದೃಷ್ಟಿಗೆ ಪ್ರಾದೇಶಿಕ ಪಕ್ಷದ ಅಗತ್ಯವಿದೆ. ಮುಂದಿನ ಚುನಾವಣೆಯಲ್ಲಿ ಮತದಾರರು ಜೆಡಿಎಸ್ ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News