ಬಿಜೆಪಿ ನಡೆಯ ವಿರುದ್ಧ ಮಾತೆ ಮಹಾದೇವಿ ಆಕ್ರೋಶ

Update: 2017-08-22 14:36 GMT

ಬೆಳಗಾವಿ,ಆ.23: ಬಿಜೆಪಿಯಲ್ಲಿರುವ ನಮ್ಮ ಸಮಾಜದ ಜನಪ್ರತಿನಿಧಿಗಳು ಸತ್ತಾಗ ಲಿಂಗಾಯತ ಸಂಸ್ಕಾರ ಕೊಡುತ್ತಾರೆಯೇ ಹೊರತು ಬಿಜೆಪಿ ಸಂಸ್ಕಾರ ಕೊಡುವುದಿಲ್ಲ ಎಂದು ಕೂಡಲ ಸಂಗಮ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿದ್ದಾರೆ.

ಮಂಗಳವಾರ ಲಿಂಗರಾಜ ಕಾಲೇಜು ಮೈದಾನದಲ್ಲಿ ಲಿಂಗಾಯತ ಸ್ವತಂತ್ರಧರ್ಮ ಹೋರಾಟ ಸಮಿತಿ ವತಿಯಿಂದ ಆಯೋಜಿಸಿದ್ದ ಲಿಂಗಾಯತ ಸ್ವತಂತ್ರಧರ್ಮ ಸಮಾವೇಶದಲ್ಲಿ ಮಾತನಾಡಿದರು.

ಪಕ್ಷ ಮುಖ್ಯವೋ, ಧರ್ಮ ಮುಖ್ಯವೋ ಎಂಬುದಕ್ಕೆ ರಾಜಕೀಯ ನಾಯಕರೇ ಉತ್ತರ ಕೊಡಬೇಕು. ಬಿಜೆಪಿಯವರು ಚುನಾವಣೆಯ ಟಿಕೆಟ್ ಪಡೆದುಕೊಳ್ಳಬೇಕಾದರೆ ಲಿಂಗಾಯತ ಕೋಟಾದಲ್ಲಿ ತೆಗೆದುಕೊಂಡು ಲಿಂಗಾಯತರಿಗೆ ಅನ್ಯಾಯವಾದಾಗ ಧ್ವನಿ ಎತ್ತಬೇಕಾಗುತ್ತದೆ. ಆದರೆ ಲಿಂಗಾಯತರಿಗೆ ಅನ್ಯಾಯವಾಗುತ್ತಿದ್ದರೂ ಏಕೆ ಬಿಜೆಪಿ ನಾಯಕರು ಮೌನವಹಿಸಿದ್ದೀರಿ ಎಂದು ಬಿಜೆಪಿಯ ಲಿಂಗಾಯತ ನಾಯಕರನ್ನು ಬಹಿರಂಗವಾಗಿ ಪ್ರಶ್ನಿಸಿದರು.

ರಾಜ್ಯದ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಸಿಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಲಕ ಕೇಂದ್ರಕ್ಕೆ ಶಿಫಾರಸು ಮಾಡುತ್ತಾರೆ. ಬಿಜೆಪಿ ನಾಯಕರು, ಸಂಸದರು ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಅನುಷ್ಠಾನದ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಹಿಂದೆ ಗೊತ್ತಿಲ್ಲದೇ ಹಿಂದೂ ವೀರಶೈವ, ವೀರಶೈವ ಲಿಂಗಾಯತ ಎಂದು ಹೇಳುತ್ತಿದ್ದೆವು. ಆದರೆ ಹೋರಾಟದ ಮೂಲಕ ಲಿಂಗಾಯತ ಎಂಬ ಬಗ್ಗೆ ಜನರು ತಿಳಿದುಕೊಂಡು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ಮೀಣ ಮೇಷ ಎಣಿಸುತ್ತಿದ್ದಾರೆ ಎಂದು ಛೇಡಿಸಿದರು.

ವೀರಶೈವರು ನಮ್ಮ ಜತೆ ಬಂದರೆ ಸ್ವಾಗತ. ಇಲ್ಲವಾದಲ್ಲಿ ದೇಶದ ಸ್ವಾತಂತ್ರಕ್ಕಾಗಿ ಗಾಂಧೀಜಿ ಬ್ರಿಟಿಷರೆ ಭಾರತ ಬಿಟ್ಟು ತೊಲಗಿ ಘೋಷಣೆ ಮಾಡಿದ್ದರು. ಅದೇ ರೀತಿ ಓ ವೀರಶೈವರೆ ಲಿಂಗಾಯತವನ್ನು ಬಿಟ್ಟು ತೊಲಗಿ ಎಂದು ಘೋಷಣೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ರವಾನಿಸಿದರು.

ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಸಾಮೀಜಿ ಮಾತನಾಡಿ, ಬಸವಣ್ಣನವರ ಪರಿವರ್ತನೆ ಪರಂಪರೆಯಲ್ಲಿ ವೀರಶೈವ ಲಿಂಗಾಯತರು ಸಾಗೋಣ. ದ್ವೇಷದಿಂದ ಏನನ್ನೂ ಸಾಧಿಸಲು ಆಗುವುದಿಲ್ಲ. ವೀರಶೈವ ಮಠಗಳ ಸ್ವಾಮೀಜಿಗಳಿಗೆ ತಿಳಿವಳಿಕೆ ಹೇಳಿ ಮುಂದಿನ ಸಮಾವೇಶಕ್ಕೆ ಅವರನ್ನು ಕರೆದುಕೊಂಡು ಬರೋಣ. ನಿಮ್ಮನ್ನು ಬಿಟ್ಟು ನಾವಿಲ್ಲ. ನಮ್ಮನ್ನು ಬಿಟ್ಟು ನೀವಿಲ್ಲ ಎಂದು ಮನವರಿಕೆ ಮಾಡಿದರು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಆರೆಸ್ಸೆಸ್‌ನ ಮೋಹನ್ ಭಾಗವತ್ ಲಿಂಗಾಯತ ವೀರಶೈವ ಬೇರೆ ಆಗದಂತೆ ನೋಡಿಕೊಳ್ಳಲು ಬಿಜೆಪಿಗೆ ಸೂಚನೆ ನೀಡಿದ್ದಾರೆ. ಈ ವಿಚಾರದಲ್ಲಿ ತಲೆ ಹಾಕಲು ಅವರು ಯಾರು. ಈ ವಿಚಾರದಲ್ಲಿ ವಿನಾಕರಣ ತಲೆ ಹಾಕಬಾರದು ಎಂದು ಭಾಗವತ್‌ರಿಗೆ ಕಟು ಎಚ್ಚರಿಕೆ ನೀಡಿದರು.


ಈಗಾಗಲೇ ಹಲವು ದಾಖಲಾತಿಗಳಲ್ಲಿ ವೀರಶೈವ ಲಿಂಗಾಯತ ಎಂದು ನಮೂದಾಗುತ್ತಿದೆ. ಇದನ್ನು ತೆಗೆದು ಲಿಂಗಾಯತ ಹಾಕಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಿಗಳಿಗೆ ಸೂಚನೆ ನೀಡಬೇಕು.
-ಬಸವಜಯ ಮೃತ್ಯುಂಜಯ, ಕೂಡಲಸಂಗಮದ ಸ್ವಾಮೀಜಿ.

ನಮ್ಮನ್ನು ತುಳಿದು ಆಳುತ್ತಿದ್ದವರಿಂದ ಬಂಧನ ಮುಕ್ತರಾಗಿದ್ದೇವೆ. ಈ ಹೋರಾಟದ ಬಗ್ಗೆ ಹಲವು ಜನರು ಟೀಕೆ ಮಾಡುತ್ತಾರೆ. ಅದಕ್ಕೆ ಯಾರು ಕಿವಿಗೊಡಬಾರದು. ನಮ್ಮ ಹಕ್ಕನ್ನು ನಾವು ಪಡೆದುಕೊಳ್ಳುವವರೆಗೂ ಹೋರಾಟ ಮುಂದುವರೆಸೋಣ.

-ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯರು.

 ರಾಜ್ಯ ಸರಕಾರ ಆದಷ್ಟು ಬೇಗ ಕೇಂದ್ರಕ್ಕೆ ಲಿಂಗಾಯತ ಧರ್ಮ ಮಾನ್ಯತೆಗೆ ಶಿಪಾರಸು ಮಾಡಬೇಕು. ಶಿಪಾರಸು ಮಾಡವವರೆಗೂ ನಮ್ಮ ಹೋರಾಟ ಕೈ ಬಿಡುವುದಿಲ್ಲ.
-ಮಾತೆ ಮಹಾದೇವಿ, ಬಸವ ಧರ್ಮ ಪೀಠಾಧ್ಯಕ್ಷೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News