ಅರ್ಜುನ ಪ್ರಶಸ್ತಿ ದೇಶದ ಮಹಿಳೆಯರಿಗೆ ಅರ್ಪಣೆ: ಫುಟ್ಬಾಲ್ ತಾರೆ ಬೆಂಬೆಮ್ ದೇವಿ

Update: 2017-08-22 18:40 GMT

ಹೊಸದಿಲ್ಲಿ, ಆ.22: ಕಳೆದ ಎರಡು ದಶಕಗಳಿಂದ ಭಾರತದ ಮಹಿಳಾ ಫುಟ್ಬಾಲ್‌ನಲ್ಲಿ ತನ್ನದೇ ಛಾಪು ಮೂಡಿಸಿರುವ ಬೆಂಬೆಮ್‌ದೇವಿ ಈವರ್ಷದ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಅಖಿಲ ಭಾರತ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್)ನಿಂದ ತನಗೆ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಲಭಿಸಿದೆ ಎಂಬ ಸುದ್ದಿ ಕೇಳಿದ ಬಳಿಕ ಬೆಂಬೆಮ್‌ದೇವಿಗೆ ಮಾತೇ ಬರುತ್ತಿಲ್ಲ. ಅವರ ಕಣ್ಣಲ್ಲಿ ಆನಂದಭಾಷ್ಪ ಸುರಿಯುತ್ತಿತ್ತು. ನಾನು ಈ ಪ್ರಶಸ್ತಿಯನ್ನು ದೇಶದ ಮಹಿಳೆಯರಿಗೆ ಅರ್ಪಿಸುವುದಾಗಿ ಅವರು ಹೇಳಿದ್ದಾರೆ.

ಭಾರತದ ಪರ 85 ಪಂದ್ಯಗಳಲ್ಲಿ ಆಡಿರುವ ದೇವಿ 32 ಗೋಲುಗಳನ್ನು ಬಾರಿಸಿದ್ದಾರೆ. ಕಳೆದ ವರ್ಷ ಶಿಲ್ಲಾಂಗ್‌ನಲ್ಲಿ ನಡೆದ ದಕ್ಷಿಣ ಏಷ್ಯನ್ ಗೇಮ್ಸ್‌ನ ವೇಳೆ ಅಂತಾರಾಷ್ಟ್ರೀಯ ಫುಟ್ಬಾಲ್‌ನಿಂದ ನಿವೃತ್ತಿಯಾಗಿದ್ದರು. ಎಐಎಫ್‌ಎಫ್‌ನೊಂದಿಗೆ ನಿಕಟ ಸಂಪರ್ಕ ಹೊಂದಿರುವ ದೇವಿ ದೇಶದ ಮಹಿಳೆಯರಲ್ಲಿ ಫುಟ್ಬಾಲ್ ಬಗ್ಗೆ ಜಾಗೃತಿ ಮೂಡಿಸಲು ಯತ್ನಿಸುತ್ತಿದ್ದಾರೆ.

ಅವರೊಂದಿಗೆ ಸುದ್ದಿಸಂಸ್ಥೆ ನಡೆಸಿದ ಮಾತುಕತೆಯ ಆಯ್ದ ಭಾಗ ಇಂತಿದೆ.

►ನಿಮಗೆ ಪ್ರಶಸ್ತಿ ಸಿಗುವ ವಿಶ್ವಾಸವಿತ್ತೇ?

ಭಾರತದ ಕ್ರೀಡಾಳುವಿನ ಪಾಲಿಗೆ ಇದೊಂದು ಪ್ರತಿಷ್ಠಿತ ಪ್ರಶಸ್ತಿ. ಬಾಲ್ಯದಲ್ಲೇ ಅರ್ಜುನ ಪ್ರಶಸ್ತಿಯ ಬಗ್ಗೆ ಕೇಳಿದ್ದೇನೆ. ಯಾವ ಕ್ರೀಡಾಪಟು ಕೂಡ ಪ್ರಶಸ್ತಿಗಾಗಿ ಆಡುವುದಿಲ್ಲ. ಕಳೆದ ಎರಡು ದಶಕಗಳಿಂದ ನಾನು ಮಾಡಿರುವ ತ್ಯಾಗ ವ್ಯರ್ಥವಾಗಲಿಲ್ಲ.

►ಈ ಪ್ರಶಸ್ತಿಯನ್ನು ಯಾರಿಗೆ ಅರ್ಪಿಸುತ್ತೀರಿ?

 ತಮ್ಮ ಕ್ಷೇತ್ರಗಳಲ್ಲಿ ಪ್ರತಿದಿನ ಕಷ್ಟಗಳನ್ನು ದಾಟಿ ಮುನ್ನಡೆಯುತ್ತಿರುವ ದೇಶದ ಮಹಿಳೆಯರಿಗೆ ಈ ಪ್ರಶಸ್ತಿ ಅರ್ಪಿಸುವೆ. ನನ್ನ ತಾಯಿ, ಸಹ ಆಟಗಾರ್ತಿಯರು ಹಾಗೂ ಕೋಚ್‌ಗಳಿಗೆ ಈ ಪ್ರಶಸ್ತಿ ಅರ್ಪಿಸುವೆ. ನನಗೆ ನಿರಂತರವಾಗಿ ಬೆಂಬಲಿಸುತ್ತಿರುವ ಎಐಎಫ್‌ಎಫ್‌ಗೆ ಕೃತಜ್ಞತೆ ಸಲ್ಲಿಸಲು ಬಯಸುವೆ.

►ದೇಶದ ಯುವ ಆಟಗಾರ್ತಿಯರಿಗೆ ನಿಮ್ಮ ಸಂದೇಶವೇನು?

ನಿಮ್ಮ ಕನಸನ್ನು ಹಿಂಬಾಲಿಸಿ. ನಿಮ್ಮ ಮೇಲೆ ಯಾವಾಗಲೂ ನಂಬಿಕೆ ಇಡಿ. ಕಠಿಣ ಶ್ರಮಕ್ಕೆ ಬೇರೆ ಪರ್ಯಾಯವಿಲ್ಲ. ಆಕಾಶದೆತ್ತರಕ್ಕೆ ನಿಮ್ಮ ಗುರಿ ಇರಲಿ. ಅದನ್ನು ನೀವು ಸಾಧಿಸಬಲ್ಲಿರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News