×
Ad

ಬಿಜೆಪಿ ಮುಖಂಡರ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಕಿಡಿ

Update: 2017-08-23 18:19 IST

ಬೆಂಗಳೂರು, ಆ.23: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಬಂದಾಗ ನಾನು ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ, ಅವರು ರಾಜ್ಯದ ಸಮಸ್ಯೆಗಳ ಬಗ್ಗೆ ಯಾರೊಂದಿಗೂ ಚರ್ಚೆ ನಡೆಸಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.

ಬುಧವಾರ ಜೆ.ಪಿ.ನಗರದಲ್ಲಿರುವ ತಮ್ಮ ನವೀಕೃತ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸೋಲಿಸಿ, ಬಿಜೆಪಿಯನ್ನು ಅಧಿಕಾರಕ್ಕೆ ತರಲು ಅಮಿತ್ ಶಾ ಬಂದಿದ್ದು, ರಾಜ್ಯದಲ್ಲಿನ ಬರಗಾಲ, ರೈತರ ಸಮಸ್ಯೆಗಳು, ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಅವರು ಯಾರೊಂದಿಗೂ ಮಾತನಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿ ನಡೆದಾಗ ರಾಜ್ಯದ ಹಿರಿಯ ಬಿಜೆಪಿ ಮುಖಂಡರು ಯಾಕೆ ಸುಮ್ಮನಿದ್ದರೂ, ಪ್ರತಿಭಟನೆ ಮಾಡಬೇಕಿತ್ತು. ಸಚಿವರ ರಾಜೀನಾಮೆ ಕೇಳಬೇಕಿತ್ತು ಎಂದು ಅಮಿತ್ ಶಾ, ರಾಜ್ಯದ ಮುಖಂಡರಿಗೆ ಆದೇಶ ನೀಡಿದ ನಂತರ ಅವರು ಶಿವಕುಮಾರ್ ರಾಜೀನಾಮೆ ಕೇಳಿದ್ದು ಹಾಸ್ಯಾಸ್ಪದ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ಆದಾಯ ಮೀರಿ ಆಸ್ತಿ ಸಿಕ್ಕಿದ್ದರೆ, ಒಡವೆ, ಹಣ, ದಾಖಲೆ ಸಿಕ್ಕಿದ್ದರೆ ರಾಜೀನಾಮೆ ಕೇಳಬಹುದಿತ್ತು. ಆದರೆ, ಐಟಿ ದಾಳಿಯಲ್ಲಿ ಅಂಥದ್ದೇನೂ ಸಿಕ್ಕಿಲ್ಲ. ಆದರೂ, ಬಿಜೆಪಿಯವರು ಡಿಕೆಶಿ ರಾಜೀನಾಮೆ ಕೇಳಿ ಬಾಲಿಶತನ ತೋರಿದರು ಎಂದು  ಹೇಳಿದರು.

ಮಹಾದಾಯಿ ವಿಚಾರದ ಕುರಿತು ನಡೆದ ಸರ್ವಪಕ್ಷ ಸಭೆಯಲ್ಲಿ ಬಿಜೆಪಿ ನಾಯಕರು ಗೋವಾ ಮುಖ್ಯಮಂತ್ರಿಯನ್ನು ಮಾತುಕತೆಗೆ ಒಪ್ಪಿಸಿ, ತಕ್ಷಣ ಸಮಸ್ಯೆ ಬಗೆಹರಿಸೋಣ ಎಂದಿದ್ದಾರೆ. ಆನಂತರ, ಏನು ಬೆಳವಣಿಗೆ ಆಗಿದೆ ಗೊತ್ತಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News