ಸೆ.12ಕ್ಕೆ ಹಂಪಿ ಕನ್ನಡ ವಿವಿ ಬೆಳ್ಳಿ ಹಬ್ಬ
ಬೆಂಗಳೂರು, ಆ.24: ಹೊಸಪೇಟೆಯಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಬೆಳ್ಳಿ ಹಬ್ಬ ಸೆ.12ರಂದು ನಿಗದಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಹೊಸಪೇಟೆಯ ಭುವನ ವಿಜಯ ಸಭಾಂಗಣ ಸಮೀಪದ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ವಿಶ್ವವಿದ್ಯಾನಿಲಯವನ್ನು ಕಟ್ಟಿ ಬೆಳೆಸಿದ ಹಿಂದಿನ ಎಲ್ಲ ಕುಲಪತಿಗಳು, ಕುಲಸಚಿವರನ್ನು ಸನ್ಮಾನಿಸಲು ನಿರ್ಧರಿಸಲಾಗಿದೆ. ಹಾಗೆಯೇ ಸಾಹಿತ್ಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.
ಬರ ನಿರ್ವಹಣೆ, ಭವಿಷ್ಯದ ಕನ್ನಡ ವಿಶ್ವವಿದ್ಯಾನಿಲಯ, ಶಿಕ್ಷಣದ ಪರಿಸ್ಥಿತಿ, ಕರ್ನಾಟಕದ ಅಭಿವೃದ್ಧಿ ಸಾಧ್ಯತೆ, ಇಂದಿನ ಸಾಂಸ್ಕೃತಿಕ ಲೋಕದ ಬಿಕ್ಕಟ್ಟುಗಳು ಹೀಗೆ ಪ್ರಮುಖ ವಿಷಯಗಳ ಕುರಿತು ಸೆ.12ರಿಂದ 18ರವರೆಗೆ ವಿವಿ ಆವರಣದಲ್ಲಿ ವಿಚಾರಗೋಷ್ಠಿಗಳು ನಡೆಯಲಿದ್ದು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.
ವಿಶ್ವವಿದ್ಯಾನಿಲಯವು 25ವರ್ಷ ಪೂರೈಸಿರುವುದರಿಂದ ಕಾರ್ಯಕ್ರಮದಲ್ಲಿ 25 ಪುಸ್ತಕಗಳನ್ನು ಸಾಂಕೇತಿಕವಾಗಿ ಬಿಡುಗಡೆ ಮಾಡಲಾಗುವುದು. ಮುಂದಿನ ವರ್ಷ ನಡೆಯಲಿರುವ ಮುಕ್ತಾಯ ಸಮಾರಂಭದಂದು ಒಟ್ಟು 500ಪುಸ್ತಕಗಳನ್ನು ಹೊರತರಲಾಗುವುದು ಎಂದು ಪ್ರೊ.ಮಲ್ಲಿಕಾ ಎಸ್.ಘಂಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.