ರೈಲ್ವೆ ಇಲಾಖೆ ವಿರುದ್ಧ ಐಆರ್‌ಐಪಿಎ ಪ್ರತಿಭಟನೆ
ಬೆಂಗಳೂರು, ಆ.24: ರೈಲ್ವೆ ಇಲಾಖೆಯಲ್ಲಿ ಕೈಗೊಳ್ಳುತ್ತಿರುವ ಹಳೆಯ ಕಾಮಗಾರಿಗಳಿಗೆ ಜಿಎಸ್‌ಟಿ ಅಡಿಯಲ್ಲಿ ತೆರಿಗೆ ಪಾವತಿಸಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಪ್ರಧಾನಿ ನರೇಂದ್ರಮೋದಿ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸುವಂತೆ ಇಂಡಿಯನ್ ರೈಲ್ವೆ ಇನ್ಫ್ರಾಸ್ಟ್ರಕ್ಚರ್ ಪ್ರೊವೈಡರ್ಸ್ ಅಸೋಸಿಯೇಶನ್(ಐಆರ್‌ಐಪಿಎ) ಆಗ್ರಹಿಸಿದೆ.
ಬುಧವಾರ ನಗರದ ದಂಡು ರೈಲ್ವೆ ನಿಲ್ದಾಣದ ಹಿಂಭಾಗದಲ್ಲಿರುವ ನೈರುತ್ಯ ರೈಲ್ವೆ ಮುಖ್ಯ ಆಡಳಿತಾಧಿಕಾರಿ ಕಚೇರಿ(ನಿರ್ಮಾಣ) ಮುಂಭಾಗದಲ್ಲಿ ಐಆರ್‌ಐಪಿಎ ಪದಾಧಿಕಾರಿಗಳು ರೈಲ್ವೆ ಇಲಾಖೆಯ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಈ ವೇಳೆ ಐಆರ್‌ಐಪಿಎ ಪದಾಧಿಕಾರಿ ಹಯಾತ್ ಕಾರ್ಗಲ್ ಮಾತನಾಡಿ, ಜು.1ರಿಂದ ದೇಶಾದ್ಯಂತ ಜಿಎಸ್‌ಟಿ ಜಾರಿಗೆ ಬಂದಿದೆ. ರೈಲ್ವೆ ಕಾಮಗಾರಿಗಳು ಜಿಎಸ್‌ಟಿ ಪ್ರಕಾರ ಸೇವಾ ತೆರಿಗೆಯ ವ್ಯಾಪ್ತಿಯಲ್ಲಿ ಬರುತ್ತದೆ. ಈ ಸೇವೆಯ ಲಾಭವನ್ನು ಯಾರು ಪಡೆಯುತ್ತಾರೋ ಅವರೇ ತೆರಿಗೆಯನ್ನು ನೀಡಬೇಕು ಎಂದರು.
ನಾವು ಮಾಡುವ ಕಾಮಗಾರಿಯ ಲಾಭವನ್ನು ರೈಲ್ವೆ ಇಲಾಖೆಯವರು ಪಡೆಯುತ್ತಾರೆ. ನಮಗೆ ಶೇ.8-10ರಷ್ಟು ಲಾಭ ಬರುತ್ತದೆ. ಆದರೆ, ಅದಕ್ಕೆ ಶೇ.12ರಷ್ಟು ತೆರಿಗೆ ಪಾವತಿಸಿ ಎನ್ನುವುದು ಅವೈಜ್ಞಾನಿಕ. ಆದುದರಿಂದ, ಆ.20ರಿಂದ ದೇಶಾದ್ಯಂತ 16 ರೈಲ್ವೆ ವಲಯಗಳಲ್ಲಿ ಸುಮಾರು 1.10 ಲಕ್ಷ ಕೋಟಿ ರೂ. ಕಾಮಗಾರಿಯನ್ನು ಸ್ಥಗಿತಗೊಳಿಸಿ ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದು ತಿಳಿಸಿದರು.
ರೈಲ್ವೆ ಇಲಾಖೆಯು ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ, ಇನ್ನೆರಡು ದಿನಗಳಲ್ಲಿ ರೈಲುಗಳ ಸಂಚಾರದಲ್ಲಿಯೂ ವ್ಯತ್ಯಯ ಉಂಟಾಗಬಹುದು. ಈಗಾಗಲೇ ನಮ್ಮ ಬೇಡಿಕೆಗಳ ಕುರಿತು ಪ್ರಧಾನಿ ನರೇಂದ್ರಮೋದಿಗೂ ಪತ್ರ ಬರೆಯಲಾಗಿದೆ ಎಂದು ಹೇಳಿದರು.
ರೈಲ್ವೆ ಕಾಮಗಾರಿಗಳ ಗುತ್ತಿಗೆದಾರರ ಚಂದ್ರವೇಲು ಮಾತನಾಡಿ, ನಾವು ಟೆಂಡರ್ ಹಾಕಿರುವುದು ಹಳೆಯ ಯೋಜನೆಗಳಿಗೆ. ಆಗ ತೆರಿಗೆ ಪ್ರಮಾಣವು ಶೇ.2 ರಿಂದ 4ರಷ್ಟಿತ್ತು. ಇದೀಗ ತೆರಿಗೆ ಪ್ರಮಾಣ ಶೇ.12ರಷ್ಟು ಆಗಿದೆ. ಇಷ್ಟೊಂದು ವ್ಯತ್ಯಾಸದ ಹಣವನ್ನು ಭರಿಸಲು ನಮಗೆ ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಳೆಯ ಯೋಜನೆಗಳಿಗೆ ಹಳೆಯ ತೆರಿಗೆ ಪ್ರಮಾಣವನ್ನೇ ವಿಧಿಸಬೇಕು. ಇಲ್ಲದಿದ್ದರೆ, ವ್ಯತ್ಯಾಸದ ಹಣವನ್ನು ಕೇಂದ್ರ ಸರಕಾರವು ರೈಲ್ವೆ ಇಲಾಖೆಯ ಮೂಲಕ ಭರಿಸಿಕೊಳ್ಳಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಐಆರ್‌ಐಪಿಎ ಪದಾಧಿಕಾರಿಗಳಾದ ಸುರೇಶ್‌ಕುಮಾರ್ ರೆಡ್ಡಿ, ಎಂ.ವಿ.ಶಂಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.