×
Ad

ಗಣಪತಿ ಪ್ರಕರಣ ಸಿಬಿಐಗೆ ವಹಿಸಿ, ಸಿಎಂ ರಾಜೀನಾಮೆ ನೀಡಲಿ: ಬಿ.ಎಸ್.ಯಡಿಯೂರಪ್ಪ

Update: 2017-08-24 20:14 IST

ಬೆಂಗಳೂರು, ಆ.24: ರಾಜ್ಯ ಸರಕಾರ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಿ ಹಾಕುವ ಉದ್ದೇಶದಿಂದಲೇ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯನ್ನು ಪರಿಗಣಿಸಿಲ್ಲ. ಹೀಗಾಗಿ, ಈ ಆರೋಪದ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ.

ಗುರುವಾರ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ತರಾತುರಿಯಲ್ಲಿ ಮಾಡಿ ಮುಗಿಸಿದ್ದಾರೆ. ಹಾಗೂ ಸರಕಾರ ಕೂಡ ಸಿಐಡಿ ತನಿಖಾ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಸಚಿವ ಕೆ.ಜೆ.ಜಾರ್ಜ್‌ಗೆ ಕ್ಲೀನ್ ಚಿಟ್ ನೀಡುವಂತೆ ಮಾಡಿದ್ದಾರೆ. ಹೀಗಾಗಿ, ಈ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಬಗ್ಗೆ ಖಾಸಗಿ ಇಂಗ್ಲಿಷ್ ಚಾನಲ್‌ವೊಂದು ವರದಿಯನ್ನು ಪ್ರಕಟಿಸಿದ್ದು, ಈ ವರದಿಯಲ್ಲಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ಪ್ರಯೋಗಾಲಯದ ಯಾವುದೇ ವರದಿಯನ್ನು ಪರಿಗಣಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಹಾಗೂ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಜೆ.ಜಾರ್ಜ್, ಪೊಲೀಸ್ ಅಧಿಕಾರಿಗಳ ಕೈವಾಡವಿರುವುದು ಶಂಕೆ ವ್ಯಕ್ತವಾಗಿದೆ ಎಂದ ಅವರು,  ಗಣಪತಿ ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕಾದರೆ ನಾಶವಾದ ಪ್ರಮುಖ ಸಾಕ್ಷ್ಯ ಪುನರ್ ಪತ್ತೆ ಹಚ್ಚುವ ಕೆಲಸವಾಗಬೇಕು. ಅಲ್ಲದೆ, ಆಗಸ್ಟ್ 26 ರಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭೇಟಿ ಮಾಡಿ ಪ್ರಕರಣ ಕುರಿತು ಮುಂದಿನ ಕ್ರಮಕ್ಕೆ ಆಗ್ರಹಪಡಿಸುತ್ತೇವೆ. ಇನ್ನೆರಡು ದಿನದಲ್ಲಿ ಬಿಜೆಪಿ ಪ್ರತಿಭಟನೆ ಆರಂಭಿಸಲಿದೆ ಎಂದರು.

ಪ್ರಕರಣದ ಸಾಕ್ಷ್ಯ ನಾಶದಲ್ಲಿ ಕೆಂಪಯ್ಯ ಪಾತ್ರ ಬಹುಮುಖ್ಯವಾಗಿದೆ. ಆರೋಪ ಸಂಬಂಧ ಈ ಹಿಂದೆ ರಾಜೀನಾಮೆ ನೀಡಿದ್ದ ಕೆ.ಜೆ. ಜಾರ್ಜ್ ಅವರು ಸಿದ್ದರಾಮಯ್ಯ ಕುತಂತ್ರದಿಂದ ಮತ್ತೆ ಸಚಿವ ಸ್ಥಾನ ಪಡೆದರು. ತನಿಖೆ ವೇಳೆ ಕೊಠಡಿಯಲ್ಲಿ ಮೂರು ಗುಂಡು ಹಾರಿಸಿದ್ದ ಬಗ್ಗೆ ಸ್ಪಷ್ಟನೆ ಇಲ್ಲ. ಪ್ರಕರಣದಲ್ಲಿ ಸರಕಾರದ ಪ್ರಭಾವಿ ನಾಯಕರ ಕೈವಾಡವಿದೆ ಎಂದು ಆರೋಪಿಸಿದರು.

ಪ್ರಕರಣದಲ್ಲಿ ಕೇಂದ್ರ ಸಚಿವ ಸದಾನಂದಗೌಡರ ಪುತ್ರನ ಹೆಸರು ಕೇಳಿ ಬಂದಿರುವ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಪ್ರಕರಣದಲ್ಲಿ ಯಾರದೇ ಪಾತ್ರ ಇದ್ದರೂ ತನಿಖೆ ಪೂರ್ಣಗೊಂಡ ಬಳಿಕ ಗೊತ್ತಾಗಲಿದೆ ಎಂದು ಹೇಳಿದರು.

ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ, ಸಿ ಫೋರ್ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಮೇಲುಗೈ ಎಂದು ತಿಳಿಸಿದೆ. ಕಾಂಗ್ರೆಸ್‌ಗೆ ಬಹುಮತ ಬರುವುದು ಗೊತ್ತಿದ್ದರೆ, ಇದು ನಿಜಕ್ಕೂ ಒಳ್ಳೆಯ ಸಮಯ. ಈ ಕೂಡಲೇ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗೋಣ ಬನ್ನಿ ಎಂದು ಕಾಂಗ್ರೆಸ್‌ಗೆ ಸವಾಲೆಸೆದರು.

ಕೋಲಾರದಲ್ಲಿ ನವಜಾತ ಶಿಶುಗಳ ಮರಣ ವಿಚಾರವನ್ನು ಸರಕಾರ ಸರಿಯಾಗಿ ನಿರ್ವಹಿಸಿಲ್ಲ. ಬಿಜೆಪಿಯ ಸತ್ಯ ಶೋಧನಾ ತಂಡ ಆಸ್ಪತ್ರೆಗೆ ಭೇಟಿ ನೀಡಿದೆ. ಶಿಶು ಮರಣಗಳ ಕುರಿತು ವಸ್ತುಸ್ಥಿತಿ ಪರಿಶೀಲನೆ ನಡೆಸಲಿದೆ. ನಮ್ಮ ತಂಡ ನೀಡುವ ವರದಿ ಮೇಲೆ ಮುಂದಿನ ಹೋರಾಟ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಡಾ.ಅಶ್ವತ್ಥ್ ನಾರಾಯಣ, ಸತೀಶ್‌ರೆಡ್ಡಿ, ಬಿಜೆಪಿ ಉಪಾಧ್ಯಕ್ಷ ಕೆ.ಪಿ.ನಂಜುಂಡಿ ಉಪಸ್ಥಿತರಿದ್ದರು.  


ಅರ್ಕಾವತಿ ಪ್ರಕರಣ ಸಿಬಿಐಗೆ ವಹಿಸಿ
ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಅವರ ರಕ್ಷಣೆಗಾಗಿಯೇ ಕೆಂಪಣ್ಣ ಆಯೋಗ ರಚಿಸಿತ್ತು. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಅಥವಾ ಸಿಬಿಐಗೆ ವಹಿಸಲು ಆಗ್ರಹಿಸಿ ಹೋರಾಟ ನಡೆಸುತ್ತೇವೆ. ಹೊಸದಿಲ್ಲಿ ಭೇಟಿ ವೇಳೆ ಈ ಕುರಿತು ಕೇಂದ್ರ ಸರಕಾರದ ಗಮನಕ್ಕೂ ತರಲಾಗುವುದು.
ಆರ್. ಅಶೋಕ್ , ಮಾಜಿ ಉಪ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News