ಸಚಿವರಾದ ಎಂ.ಬಿ.ಪಾಟೀಲ್, ವಿನಯ್ ಕುಲಕರ್ಣಿ ರಾಜೀನಾಮೆಗೆ ಆಗ್ರಹ
ಬೆಂಗಳೂರು, ಆ.24: ಪ್ರತ್ಯೇಕ ಧರ್ಮದ ಹೆಸರಿನಲ್ಲಿ ವೀರಶೈವ ಹಾಗೂ ಲಿಂಗಾಯತರ ನಡುವೆ ಕಂದಕ ಸೃಷ್ಟಿಸಿ ಸಮಾಜದ ಶಾಂತಿ ಕದಡುತ್ತಿರುವ ಸಚಿವರಾದ ಎಂ.ಬಿ.ಪಾಟೀಲ ಹಾಗೂ ವಿನಯ ಕುಲಕರ್ಣಿ ಕೂಡಲೇ ರಾಜೀನಾಮೆ ನೀಡಬೇಕೆಂದು ಕೇದಾರ ವಿಕಾಸ ಸಮಿತಿ ಆಗ್ರಹಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ನಾಗನಗೌಡ ಪಾಟೀಲ, ರಾಜ್ಯದ ಸಚಿವರಾಗಿ ಕೇವಲ ಒಂದು ಧರ್ಮದ ವಕ್ತಾರರಂತೆ ವರ್ತಿಸುತ್ತಿರುವುದು ಸರಿಯಾದ ಕ್ರಮವಲ್ಲ. ಒಂದು ವೇಳೆ ಅವರಿಗೆ ನಿಜವಾಗಿಯೂ ಸಮುದಾಯದ ಮೇಲೆ ಕಾಳಜಿಯಿದ್ದರೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬೀದಿಯಲ್ಲಿ ನಿಂತು ಹೋರಾಟ ಮಾಡಲಿ. ಆದರೆ, ಸಂವಿಧಾನದತ್ತ ಅಧಿಕಾರದಲ್ಲಿರುವ ಜನಪ್ರತಿನಿಧಿಗಳು ಬೀದಿಯಲ್ಲಿ ನಿಂತು ಹೋರಾಟ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದರು.
ರೋಸ್ಟರ್ ಪದ್ಧತಿ ಅನುಸಾರ ಈಗಾಗಲೇ ವೀರಶೈವ, ಲಿಂಗಾಯತರಿಗೆ ಸರಕಾರ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದರೂ ಅಲ್ಪಸಂಖ್ಯಾತರ ಹೆಸರಿನಲ್ಲಿ ತಮ್ಮ ಸ್ವಹಿತಾಸಕ್ತಿಗಾಗಿ ಪ್ರತ್ಯೇಕ ಧರ್ಮದ ಹೆಸರಿನಲ್ಲಿ ಕೆಲವು ಸ್ವಾಮೀಜಿಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ. ಇದು ಅಲ್ಪಸಂಖ್ಯಾತರ ಹಕ್ಕು ಕಸಿದುಕೊಂಡಂತಾಗಲಿದೆ. ಹೀಗಾಗಿ, ವೀರಶೈವ-ಲಿಂಗಾಯತ ಧರ್ಮ ಒಡೆದು ಆಳುವ ನೀತಿ ಸರಿಯಲ್ಲ ಎಂದು ತಿಳಿಸಿದರು.
ಸಮಿತಿ ಮುಖಂಡ ರಮೇಶ ಬೋಸ್ಲೆ ಮಾತನಾಡಿ, ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಲಿಂಗಾಯತ ಮಹಾ ರ್ಯಾಲಿಯಲ್ಲಿ ಜನಪ್ರತಿನಿಧಿಗಳು ಸಮಾಜ ಸ್ವಾಸ್ಥ್ಯವನ್ನು ಕಾಪಾಡುವ ಬದಲಾಗಿ ಸಮಾಜದಲ್ಲಿ ಶಾಂತಿ ಕದಡುವ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ಸಿಗುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಕರಪತ್ರಗಳನ್ನು ಹೊರಡಿಸಿ ಸಮಾಜದಲ್ಲಿ ಶಾಂತಿ ಕದಡುತ್ತಿದ್ದಾರೆಂದು ಕಿಡಿಕಾರಿದರು.