ಮನೆ ಮಾಲಕನ ಮೇಲೆ ಹಲ್ಲೆ ನಡೆಸಿ ದರೋಡೆ
ಬೆಂಗಳೂರು, ಆ.24: ಬಾಡಿಗೆ ಮನೆ ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು ಮನೆ ಮಾಲಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ದರೋಡೆ ಮಾಡಿರುವ ಘಟನೆ ಇಲ್ಲಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹಲ್ಲೆಯಿಂದ ಗಾಯಗೊಂಡಿರುವ ಸುಂಕದಕಟ್ಟೆಯ ಮಹದೇವಯ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರು ಮಂದಿ ದುಷ್ಕರ್ಮಿಗಳು ಮನೆ ಬಾಗಿಲು ತಟ್ಟಿದಾಗ, ಮಹದೇವಯ್ಯ ಪತ್ನಿ ಬಾಗಿಲು ತೆಗೆದಿದ್ದರು. ಆಗ ದರೋಡೆಕೋರರು ಅವರ ಬಳಿಯಿದ್ದ ಮಾಂಗಲ್ಯ ಸರ ಕಿತ್ತುಕೊಳ್ಳಲು ಮುಂದಾದಾಗ ಅವರು ಕಿರುಚಿಕೊಂಡಿದ್ದಾರೆ. ಮಹದೇವಯ್ಯ ಹೊರಬಂದು ದುಷ್ಕರ್ಮಿಗಳನ್ನು ತಡೆಯಲು ಮುಂದಾದಾಗ ದುಷ್ಕರ್ಮಿಗಳು, ಮಹದೇವಯ್ಯ ಹೊಟ್ಟೆಗೆ ಮಾರಕಾಸ್ತ್ರಗಳಿಂದ ಇರಿದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹದೇವಯ್ಯ ಬಳಿಯಿದ್ದ ಸರವನ್ನು ಕಿತ್ತುಕೊಂಡು ದರೋಡೆಕೋರರು ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಆರೋಪಿಗಳಿಗಾಗಿ ಪತ್ತೆ ಕಾರ್ಯ ನಡೆಸುತ್ತಿದ್ದಾರೆ.