×
Ad

ನಮ್ಮ ಮೆಟ್ರೋ: ಸೂರ್ಯ ನಗರದವರೆಗೆ ವಿಸ್ತರಣೆ

Update: 2017-08-26 17:48 IST

ಬೆಂಗಳೂರು, ಆ.26: ನಮ್ಮ ಮೆಟ್ರೋ 3ನೆ ಹಂತವನ್ನು ಹೊಸೂರು ರಸ್ತೆಯ ಬೊಮ್ಮಸಂದ್ರದಿಂದ ಕೆಎಚ್‌ಬಿ ಸೂರ್ಯ ನಗರದವರೆಗೂ ವಿಸ್ತರಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.

ಈ ಮಾರ್ಗ ನಮ್ಮ ಮೆಟ್ರೋ 2ನೆ ಹಂತದಲ್ಲಿ ನಿರ್ಮಾಣವಾಗಲಿರುವ ಆರ್.ವಿ. ರಸ್ತೆ-ಬೊಮ್ಮಸಂದ್ರ ಮೆಟ್ರೋ ಮಾರ್ಗದ ವಿಸ್ತರಣೆಯಾಗಿರಲಿದ್ದು, ಬೊಮ್ಮಸಂದ್ರದಿಂದ ಅಂದಾಜು 3-4 ಕಿ.ಮೀ. ಅಂತರದಲ್ಲಿ ಕೆಎಚ್‌ಬಿ ಸೂರ್ಯನಗರವಿದ್ದು, ಲಕ್ಷಾಂತರ ಜನರಿಗೆ ಮೆಟ್ರೋ ಸಂಪರ್ಕ ಸಿಗಲಿದೆ. ಈಗಾಗಲೇ ಮಾರ್ಗ ನಿರ್ಮಾಣದ ಕಾರ್ಯಸಾಧ್ಯತಾ ವರದಿ ತಯಾರಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ತಿಳಿಸಿದ್ದಾರೆ.

ಬೊಮ್ಮಸಂದ್ರದಿಂದ ಸೂರ್ಯ ನಗರದವರೆಗೆ ಮೆಟ್ರೋ ವಿಸ್ತರಣೆಗಾಗಿ ಸ್ಥಳೀಯರು ಸಹಿ ಸಂಗ್ರಹ ಅಭಿಯಾನವನ್ನು ನಡೆಸಿದ್ದರು. ಅದರನ್ವಯ ನಗರಾಭಿವೃದ್ಧಿ ಇಲಾಖೆಯು ಈ ಮಾರ್ಗ ವಿಸ್ತರಣೆ ಕುರಿತು ಪರಿಶೀಲಿಸಲು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿತ್ತು.

2ನೆ ಹಂತದಲ್ಲಿ ಜಯನಗರದ ಆರ್.ವಿ.ರಸ್ತೆ ಮೆಟ್ರೋ ನಿಲ್ದಾಣದ ಪಕ್ಕದಿಂದಲೇ ಹೊಸ ಮಾರ್ಗ ಪ್ರಾರಂಭವಾಗಿ ರಾಗಿಗುಡ್ಡ, ಜಯದೇವ, ಸಿಲ್ಕ್ ಬೋರ್ಡ್, ಎಚ್‌ಎಸ್‌ಆರ್ ಲೇಔಟ್, ಇಲೆಕ್ಟ್ರಾನಿಕ್ ಸಿಟಿ, ಹೆಬ್ಬಗೊಡಿ ಮೂಲಕ ಹೊಸೂರು ರಸ್ತೆಯಲ್ಲಿ ಸಾಗಿ ಬೊಮ್ಮಸಂದ್ರ ತಲುಪಲಿದೆ.

18.8 ಕಿ.ಮೀ ಉದ್ದದ ಈ ಮಾರ್ಗದ ನಿರ್ಮಾಣಕ್ಕೆ ಈಗಾಗಲೇ ಬಿಎಂಆರ್‌ಸಿಎಲ್ ಟೆಂಡರ್ ಕರೆದಿದೆ. ಅಂದಾಜು 5,744 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ವಾಗಲಿರುವ ಈ ಮಾರ್ಗವನ್ನು 3 ಪ್ಯಾಕೇಜ್‌ಗಳಾಗಿ ವಿಭಜಿಸಿ ಟೆಂಡರ್ ಕರೆಯಲಾಗಿದೆ ಎಂದು ತಿಳಿದು ಬಂದಿದೆ.

ಆರ್.ವಿ. ರಸ್ತೆಯಿಂದ ಎಚ್‌ಎಸ್‌ಆರ್ ಲೇಔಟ್ ವರೆಗಿನ 6.34 ಕಿ.ಮೀ ಉದ್ದದ ಮಾರ್ಗ ನಿರ್ಮಾಣದ ಗುತ್ತಿಗೆಯನ್ನು ಹಿಂದೂಸ್ತಾನ್ ಕನ್ಸಟ್ರಕ್ಷನ್ ಕಂಪೆನಿ ಹಾಗೂ ಯುಸಿ ಕನ್ಸಸ್ಟ್ರಕ್ಷನ್ ಕಂಪೆನಿಗೆ ಬಿಎಂಆರ್‌ಸಿಎಲ್ ನೀಡಿದೆ. 798 ಕೋಟಿ ರೂ.ವೆಚ್ಚದ ಈ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಕೆಎಚ್‌ಬಿ ಸೂರ್ಯ ನಗರದವರೆಗೂ ವಿಸ್ತರಣೆಯಾಗಲಿರುವ ಈ ಮಾರ್ಗವು 2021-22ರ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News