ಪಿಎಸ್ಸೈ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ
ಬೆಂಗಳೂರು, ಆ. 26: ರಸ್ತೆಯಲ್ಲಿ ನಡೆಯುತ್ತಿದ್ದ ಗುಂಪು ಘರ್ಷಣೆ ತಡೆಯಲು ಮುಂದಾಗಿದ್ದ ಪಿಎಸ್ಸೈಯೊಬ್ಬರ ಮೇಲೆ ರೌಡಿಗಳು ಹಲ್ಲೆ ನಡೆಸಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಗರದ ಡಿಜೆಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ ಸ್ಪೆಪೆಕ್ಟರ್ ನಯಾಝ್ ಎಂಬುವರ ಮೇಲೆ ರೌಡಿಶೀಟರ್ ನದೀಮ್ ಸೇರಿ ಮೂವರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆ ವಿವರ: ಆ.24ರ ಗುರುವಾರ ಸಂಜೆ 6ಕ್ಕೆ ಡಿಜೆ ಹಳ್ಳಿಯ ಶ್ಯಾಂಪುರ ರಸ್ತೆಯಲ್ಲಿ ರೌಡಿಶೀಟರ್ ನದೀಮ್ ಮತ್ತವರ ಸಹಚರರು ಉಮರ್ ಎಂಬಾತನನ್ನು ಕೊಲೆ ಮಾಡಲು ಮಾರಕಾಸ್ತ್ರಗಳನ್ನು ಹಿಡಿದು ಬೆನ್ನಟ್ಟಿದರು. ಈ ಬಗ್ಗೆ ಮಾಹಿತಿ ಸಂಗ್ರಹಿಸಿ ತಕ್ಷಣಕ್ಕೆ ಸ್ಥಳಕ್ಕೆ ಬಂದ ಪಿಎಸ್ಸೈ ನಯಾಝ್ ಮತ್ತು ಸಿಬ್ಬಂದಿ ಈ ಹತ್ಯೆ ತಡೆಯಲು ನದೀಮ್ ಗ್ಯಾಂಗ್‌ನ ಬೆನ್ನಹತ್ತಿದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ತಿರುಗಿಬಿದ್ದ ನದೀಮ್ ಹಾಗೂ ಆತನ ಸಹಚರರು ಪಿಎಸ್ಸೈ ನಯಾಝ್ ಮೇಲೆ ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಇತರ ಪೊಲೀಸ್ ಸಿಬ್ಬಂದಿ ನೆರವಿಗೆ ಬಂದಿದ್ದರಿಂದ ನದೀಮ್ ಸಹಚರರು ಪರಾರಿಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸಿಸಿ ಟಿವಿ: ಸಂಜೆ ವೇಳೆಯಲ್ಲಿ ಸಿನಿಮೀಯ ರೀತಿಯಲ್ಲಿ ರೌಡಿಗಳು ಮಾರ ಕಾಸ್ತ್ರಗಳನ್ನಿಡಿದು ಬಡಿದಾಟಕ್ಕೆ ಮುಂದಾಗಿದ್ದಾರೆ. ಉಮರ್‌ನನ್ನು ನದೀಮ್ ಸೇರಿ ಐವರು ಬೆನ್ನಟ್ಟಿರುವುದು ಸಿಸಿ ಟಿವಿಯಲ್ಲಿ ದಾಖಲಾಗಿದೆ. ಪೊಲೀಸರು ಮಧ್ಯಪ್ರವೇಶಿಸಿದ್ದರಿಂದ ಉಮರ್‌ನ ಹತ್ಯೆ ತಪ್ಪಿದೆ. ಇನ್ನೂ ಘಟನೆಯಲ್ಲಿ ಗಾಯಗೊಂಡಿರುವ ನಯಾಝ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಡಿಜೆಹಳ್ಳಿ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆಯುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಪಿಎಸ್ಸೈ ನಯಾಝ್ ಮುಫ್ತಿಯಲ್ಲಿದ್ದು, ಜೊತೆಯಲ್ಲಿ ಪೇದೆಗಳು ಘಟನೆ ನಡೆಯುವ ಸ್ಥಳಕ್ಕೆ ಹೋಗಿದ್ದರು. ಆದರೆ, ಆರೋಪಿಗಳಿಗೆ ಪೊಲೀಸರು ಎಂದು ತಿಳಿದಿಲ್ಲ. ಈ ಸಂಬಂಧ ಬಾಣಸವಾಡಿ ಎಸಿಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಶೀಘ್ರದಲ್ಲಿಯೇ ನದೀಮ್, ಆತನ ಸಹಚರರನ್ನು ಸೆರೆ ಹಿಡಿಯಲಾಗುವುದು.
-ಸೀಮಂತ್ ಕುಮಾರ್ ಸಿಂಗ್, ಹೆಚ್ಚುವರಿ ಪೊಲೀಸ್ ಆಯುಕ್ತ