×
Ad

ಆ.28ರಿಂದ ಕೃಷಿ ತಂತ್ರಜ್ಞಾನ ಮೇಳ

Update: 2017-08-26 18:15 IST

ಬೆಂಗಳೂರು, ಆ. 26: ಸಂಕಷ್ಟಕ್ಕೆ ಸಿಲುಕಿರುವ ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸುವ ನಿಟ್ಟಿನಲ್ಲಿ ಕೃಷಿಯನ್ನು ಆಧುನಿಕ ಯಂತ್ರೋಪಕರಣಗಳ ಬಳಕೆಗೆ ಪ್ರೋತ್ಸಾಹಿಸಲು ಎಫ್‌ಕೆಸಿಸಿಐ ಹಾಗೂ ಮೀಡಿಯಾ ಟುಡೆ ಗ್ರೂಪ್ ಆಶ್ರಯದಲ್ಲಿ ಆ.28ರಿಂದ ಮೂರು ದಿನಗಳ ಕಾಲ ಕೃಷಿ ತಂತ್ರಜ್ಞಾನ ಹಾಗೂ ಫುಡೆಕ್ಸ್-2017 ಮೇಳವನ್ನು ಏರ್ಪಡಿಸಲಾಗಿದೆ ಎಂದು ಮೀಡಿಯಾ ಟುಡೆ ಗ್ರೂಪ್‌ನ ಮುಖ್ಯಸಂಘಟಕ ಎಸ್.ಜಾಫರ್ ನಖ್ವಿ ತಿಳಿಸಿದ್ದಾರೆ.

ಶನಿವಾರ ನಗರದ ಎಫ್‌ಕೆಸಿಸಿಐ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ರಸ್ತೆಯಲ್ಲಿನ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ 9ನೆ ಆವೃತ್ತಿಯ ಕೃಷಿ ತಂತ್ರಜ್ಞಾನ ಹಾಗೂ ಫುಡೆಕ್ಸ್-2017 ಮೇಳವನ್ನು ಆಯೋಜನೆ ಮಾಡಲಾಗಿದೆ. ಅಂದು ನಡೆಯುವ ಮೇಳವನ್ನು ರಾಜ್ಯಪಾಲ ವಜೂಬಾಯಿ ವಾಲಾ ಮೇಳವನ್ನು ಉದ್ಘಾಟನೆ ಮಾಡಲಿದ್ದು, ಕಾನೂನು ಸಚಿವ ಟಿ.ಬಿ.ಜಯಚಂದ್ರ, ಕೃಷಿ ಇಲಾಖೆ ಆಯುಕ್ತ ಜಿ.ಸತೀಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಇತ್ತೀಚೆಗೆ ಕೃಷಿಯಲ್ಲಿ ತೊಡಗಿರುವವರಿಗೆ ಕೂಲಿ ಕಾರ್ಮಿಕರ ಕೊರತೆ ಕಾಡುತ್ತಿದೆ. ಇದಕ್ಕಾಗಿ ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳು ಹಾಗೂ ಮಹಿಳಾ ಕೃಷಿಕರು ಬೃಹತ್ ಯಂತ್ರೋಕರಣ ಬಳಕೆಗೆ ತೊಂದರೆಯಾಗಬಹುದು. ಅವರಿಗಾಗಿ ಸರಳ ಹಾಗೂ ಹಗುರವಾದ ಕೃಷಿ ಯಂತ್ರೋಪಕರಣಗಳನ್ನು ಪರಿಚಯ ಮಾಡಿಕೊಡುವುದು ಈ ಮೇಳದ ಉದ್ದೇಶ ಎಂದರು.

ಮೂರು ದಿನಗಳ ಕಾಲ ನಡೆಯುವ ಮೇಳದಲ್ಲಿ ಚೀನಾ, ಜಪಾನ್, ಕೊರಿಯಾ, ತೈವಾನ್ ಸೇರಿದಂತೆ ಇನ್ನಿತರ ದೇಶಗಳ ಪ್ರತಿನಿಧಿಗಳು ಸೇರಿದಂತೆ 400 ಮಂದಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಕೃಷಿಕರು ಬೆಳೆಯುವ ಬೆಳೆಗೆ ವೈಜ್ಞಾನಿಕ ಬೆಲೆ ದೊರೆಯಬೇಕು. ಅವರ ಆದಾಯ ದುಪ್ಪಟ್ಟಾಗಬೇಕೆಂಬುದು ಪ್ರಧಾನಿ ಮೋದಿ ಅವರ ಕನಸು.

ಈ ಹಿನ್ನೆಲೆಯಲ್ಲಿ ಕೃಷಿಕರಿಗೆ ಹೊಸದಾಗಿ ಆವಿಷ್ಕಾರಗೊಂಡಿರುವ ಕೃಷಿ ಯಂತ್ರೋಪಕರಣಗಳ ಬಳಕೆಗೆ ಪ್ರೋತ್ಸಾಹ ನೀಡುವ ಉದ್ದೇಶ. ಟೊಮೊಟೊ, ಆಲೂಗಡ್ಡೆ ಬೆಳೆಯುವವರು ಬೆಲೆ ಇಲ್ಲದೆ ನಷ್ಟ ಅನುಭವಿಸುವ ಬದಲು ಕೆಲವು ಯಂತ್ರಗಳ ಮೂಲಕ ಟೊಮೊಟೊ, ಆಲೂಗಡ್ಡೆಯಿಂದ ಲಾಭ ಮಾಡಿಕೊಳ್ಳಬಹುದು. ಆಲೂಗಡ್ಡೆಯಿಂದ ಚಿಪ್ಸ್ ತಯಾರಿಸುವಿಕೆ, ಟೊಮೊಟೊದಿಂದ ಕೆಚಪ್ ತಯಾರಿಸಿ ಅದರಿಂದ ಆದಾಯ ವೃದ್ಧಿಸಿಕೊಳ್ಳಬಹುದು ಎಂದರು.

ಎಫ್‌ಕೆಸಿಸಿಐ ಅಧ್ಯಕ್ಷ ಎಸ್.ರವಿ ಮಾತನಾಡಿ, ಕೃಷಿಕರಿಗೆ ಅನುಕೂಲ ಕಲ್ಪಿಸಬೇಕು. ಅವರ ಆದಾಯ ದುಪ್ಪಟ್ಟಾಗಬೇಕೆಂಬ ಉದ್ದೇಶದಿಂದ ಮೇಳವನ್ನು ಆಯೋಜನೆ ಮಾಡಲಾಗಿದೆ. ಈ ಮೇಳಕ್ಕೆ ಕೃಷಿಕರು ಮಾತ್ರವಲ್ಲದೆ, ವಿವಿಧ ಬೆಳೆಗಳನ್ನು ಹಿಟ್ಟು ಮಾಡಿಕೊಡುವ ಗಿರಣಿಗಳ ಮಾಲಕರು, ಅಕ್ಕಿ ಪಾಲಿಶ್ ಮಾಡಿಕೊಡುವವರಿಗೂ ಅನುಕೂಲವಾಗುವಂತಹ ಯಂತ್ರೋಪಕರಣಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News