ದಲಿತರನ್ನು ಭೋಜನಕ್ಕೆ ಆಹ್ವಾನಿಸಿದ ಬಿಎಸ್‌ವೈ
ಬೆಂಗಳೂರು, ಆ.26: ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪಆ.28ರಂದು ನಗರದ ಡಾಲರ್ಸ್ ಕಾಲನಿಯಲ್ಲಿರುವ ತಮ್ಮ ನಿವಾಸದಲ್ಲಿ ದಲಿತರಿಗಾಗಿ ಭೋಜನಕೂಟ ಆಯೋಜಿಸಿದ್ದಾರೆ.
ಬಿಜೆಪಿಯ ಜನಸಂಪರ್ಕ ಅಭಿಯಾನದ ವೇಳೆ ರಾಜ್ಯದ ವಿವಿಧ ಭಾಗಗಳಲ್ಲಿ ದಲಿತರ ಮನೆಗಳಿಗೆ ಭೇಟಿ ನೀಡಿ ಯಡಿಯೂರಪ್ಪ ಸೇರಿದಂತೆ ಇನ್ನಿತರ ಬಿಜೆಪಿ ನಾಯಕರು, ಭೋಜನ ಸ್ವೀಕರಿಸಿದ್ದರು. ಅದರ ಮುಂದುವರೆದ ಭಾಗವಾಗಿ, ಈಗ 33 ದಲಿತ ಕುಟುಂಬಗಳನ್ನು ನಗರದ ಡಾಲರ್ಸ್ ಕಾಲನಿಯಲ್ಲಿರುವ ತಮ್ಮ ನಿವಾಸಕ್ಕೆ ಯಡಿಯೂರಪ್ಪ ಆಹ್ವಾನಿಸಿದ್ದಾರೆ. ದಲಿತರಿಗಾಗಿ ವಿಶೇಷ ಭೋಜನ ವ್ಯವಸ್ಥೆಯನ್ನು ಸಿದ್ಧಪಡಿಸುವಂತೆ ಈಗಾಗಲೇ ಮುಖಂಡರಿಗೆ ಅವರು ಸೂಚನೆ ನೀಡಿದ್ದಾರೆ.
ದಲಿತರ ಮನೆಗೆ ಹೋಗಿ ಹೊಟೇಲ್‌ನಿಂದ ತಿಂಡಿ ತಂದು ಸೇವನೆ ಮಾಡಿದ್ದರು ಎಂಬ ಆಪಾದನೆಯನ್ನು ಯಡಿಯೂರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಆಡಳಿತರೂಢ ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರಿಂದ ಎದುರಿಸಬೇಕಾಯಿತು. ಅಲ್ಲದೆ, ದಲಿತರ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ ನಿಮ್ಮ ಮನೆಯ ಹೆಣ್ಣು ಮಕ್ಕಳನ್ನು ದಲಿತರ ಮನೆಗೆ ಹಾಗೂ ದಲಿತರ ಮನೆಯ ಹೆಣ್ಣು ಮಕ್ಕಳನ್ನು ನಿಮ್ಮ ಮನೆಯವರಿಗೆ ಮದುವೆ ಮಾಡಿಸುವ ಮೂಲಕ ಬೀಗತನ ಮಾಡಿ ಎಂದು ಯಡಿಯೂರಪ್ಪಗೆ ಸಿದ್ದರಾಮಯ್ಯ ಸವಾಲು ಹಾಕಿದ್ದರು. ಈ ಬಗ್ಗೆ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಲು ಯಡಿಯೂರಪ್ಪ ತಮ್ಮ ನಿವಾಸಕ್ಕೆ ದಲಿತರನ್ನು ಭೋಜನಕ್ಕೆ ಆಹ್ವಾನಿಸುತ್ತಿದ್ದಾರೆ.