ಶೀಘ್ರದಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಆ. 26: ಅತೀ ಶೀಘ್ರದಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಶನಿವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆಗೆ ಈಗಾಗಲೇ ಪಕ್ಷದ ಹೈಕಮಾಂಡ್ ಸಮ್ಮತಿಸಿದ್ದು, ಶೀಘ್ರದಲ್ಲೇ ವಿಸ್ತರಣೆ ಕಾರ್ಯವನ್ನು ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.
ನಿನ್ನೆಯಷ್ಟೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ರಾಜ್ಯಕ್ಕೆ ಭೇಟಿ ನೀಡಿದ್ದರು. ಈ ತಿಂಗಳ ಅಂತ್ಯದಲ್ಲಿ ಮತ್ತೆ ಪಕ್ಷ ಸಂಘಟನೆ ಕಾರ್ಯಕ್ಕೆ ಆಗಮಿಸಲಿದ್ದಾರೆ ಎಂದು ವಿವರಣೆ ನೀಡಿದರು.
ಸಿಬಿಐಗೆ ಈಗ ಸಾಧ್ಯವಿಲ್ಲ: ಡಿವೈಎಸ್ಪಿ ಎಂ.ಕೆ.ಗಣಪತಿ ಪ್ರಕರಣದಲ್ಲಿ ಸಿಬಿಐ ಒಪ್ಪಿಸಬೇಕೆಂದು ಬಿಜೆಪಿ ಆಗ್ರಹಿಸುತ್ತಿದೆ. ಈಗಾಗಲೇ ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಹೀಗಿರುವಾಗ ಮತ್ತೊಂದು ತನಿಖೆಗೆ ಸಾಧ್ಯವಿಲ್ಲ. ಹೀಗಿದ್ದರೂ ಈ ರೀತಿ ಹೇಳಿಕೆ ನೀಡುವುದು ಎಷ್ಟು ಸರಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಡಿವೈಎಸ್ಪಿ ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಆ ಪಕ್ಷದ ನಾಯಕರು ಮಾಡಿರುವ ಆರೋಪಗಳೆಲ್ಲ ಸುಳ್ಳು. ಯಡಿಯೂರಪ್ಪಅವರಿಗೆ ಸತ್ಯ ಹೇಳಿ ಗೊತ್ತಿಲ್ಲ. ಯಾವತ್ತೂ ಅವರು ಸತ್ಯ ಹೇಳುವುದಿಲ್ಲ. ಅವರು ಹೇಳುವುದೆಲ್ಲ ಬರೇ ಸುಳ್ಳು. ಯಡಿಯೂರಪ್ಪಅವರು ಹೇಳುವುದಕ್ಕೆಲ್ಲ ಪ್ರತಿಕ್ರಿಯೆ ನೀಡಲು ಆಗುವುದಿಲ್ಲ ಎಂದು ನಿರಾಕರಿಸಿದರು.
ದಲಿತರಿಗೆ ಔತಣಕೂಟ ಏರ್ಪಡಿಸಿದ ಬಿ.ಎಸ್.ಯಡಿಯೂರಪ್ಪ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದ ಅವರು, ಪರಿಶಿಷ್ಟರ ಭಡ್ತಿ ಮೀಸಲಾತಿ ಸಂಬಂಧ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.