ಭಾರತ-ಅಮೆರಿಕ ಸಂಬಂಧ ಮತ್ತಷ್ಟು ಬಲಗೊಳ್ಳಬೇಕು: ಎಚ್.ಡಿ.ದೇವೇಗೌಡ
ಬೆಂಗಳೂರು, ಆ.26: ಭಾರತ ಹಾಗೂ ಅಮೆರಿಕ ನಡುವಿನ ಸಂಬಂಧ ಮತ್ತಷ್ಟು ಬಲಗೊಳ್ಳಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.
ಪದ್ಮಾನಾಭನಗರದಲ್ಲಿನ ತಮ್ಮ ನಿವಾಸದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಾಜಕೀಯ ಸಲಹೆಗಾರ ಮಾರ್ಕ್ ಬರ್ನ್ ಜೊತೆ ನಡೆದ ಸೌಹಾರ್ದ ಭೇಟಿ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಭಾರತ ಮತ್ತು ಅಮೆರಿಕದ ನಡುವಿನ ಸೌಹಾರ್ದ ಸಂಬಂಧ ಬಗ್ಗೆ ಈ ಸಂದರ್ಭದಲ್ಲಿ ನಾವಿಬ್ಬರು ಮೆಲುಕು ಹಾಕಿದ್ದೇವೆ. ಪಾಕಿಸ್ತಾನವನ್ನು ಭಯೋತ್ಪಾದಕ ದೇಶ ಎಂದು ಅಮೆರಿಕ ಘೋಷಣೆ ಮಾಡಿರುವುದು ಸರಿಯಾಗಿದೆ ಎಂದು ಹೇಳಿದರು.
ಚರ್ಚೆ ವೇಳೆಯಲ್ಲಿ ಮುಖ್ಯವಾಗಿ ಎಚ್1 ವೀಸಾ ಬಗ್ಗೆ ಮಾತನಾಡಿದ್ದೇನೆ. ಭಾರತದ ಸಾಕಷ್ಟು ಪ್ರತಿಭಾವಂತ ಯುವಕರು, ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಅಮೆರಿಕದವರು 'ಅಮೆರಿಕ ಮೊದಲು' ಎಂಬ ಘೋಷ ವಾಕ್ಯದೊಂದಿಗೆ ವೀಸಾ ವಿಚಾರವಾಗಿ ಕೆಲ ಬದಲಾವಣೆ ತರಲು ಹೊರಟಿದೆ ಎಂದು ತಿಳಿಸಿದರು.
ವೀಸಾ ಸಮಸ್ಯೆಯನ್ನು ಪ್ರಧಾನಿ ನರೇಂದ್ರಮೋದಿ ಬಗೆಹರಿಸುತ್ತಾರೆ ಎಂಬ ನಂಬಿಕೆಯಿದೆ. ನನಗೂ ಅಮೆರಿಕಗೆ ಬರುವಂತೆ ಮುಕ್ತ ಆಹ್ವಾನ ನೀಡಿದ್ದಾರೆ. ಅದಕ್ಕಾಗಿ ಅವರಿಗೆ ಆಭಾರಿಯಾಗಿದ್ದೇನೆ. ಇದು ಚುನಾವಣೆ ವರ್ಷವಾಗಿರುವುದರಿಂದ ನಾನು ಅಮೆರಿಕಗೆ ಹೊಗಲು ಸಾಧ್ಯವಿಲ್ಲ. ಸಾಧ್ಯವಾದರೆ ಚುನಾವಣೆ ನಂತರ ಅಮೆರಿಕಗೆ ಹೊಗುತ್ತೇನೆ ಎಂದು ದೇವೇಗೌಡ ಮಾಹಿತಿ ನೀಡಿದರು.
ಭಾರತ ಮತ್ತು ಅಮೇರಿಕ ನಡುವಿನ ಸಂಬಂಧ ವೃದ್ಧಿ, ಎಚ್ 1 ವೀಸಾ ಬಗ್ಗೆ ದೇವೆಗೌಡರು ನನ್ನ ಬಳಿ ಚರ್ಚೆ ನಡೆಸಿದ್ದಾರೆ. ಇದೊಂದು ಸೌಹಾದರ್ಯುತ ಭೇಟಿಯಾಗಿದೆ. ಹೀಗಾಗಿ ದೇವೆಗೌಡರು ನೀಡಿರುವ ಸಂದೇಶವನ್ನು ಯಥಾವತ್ತಾಗಿ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತಲುಪಿಸುವೆ ಎಂದು ಮಾರ್ಕ್ ಬರ್ನ್ ತಿಳಿಸಿದರು.