×
Ad

ಪಶ್ಚಿಮಘಟ್ಟದ ಅರಣ್ಯ ಸಂಪತ್ತು ರಕ್ಷಣೆಗೆ ಆಗ್ರಹಿಸಿ ಧರಣಿ

Update: 2017-08-26 19:15 IST

ಬೆಂಗಳೂರು, ಆ. 26: ಪಶ್ಚಿಮಘಟ್ಟಗಳಲ್ಲಿನ ಅರಣ್ಯ ಸಂಪತ್ತು ಮತ್ತು ಕಾವೇರಿ ನದಿ ರಕ್ಷಿಸಲು ಆಗ್ರಹಿಸಿ ಕ್ರಿಸ್ಪ್ ಸಂಘಟನೆ ಸದಸ್ಯರು ಮತ್ತು ಕೊಡವ ಸಮಾಜದ ಮುಖಂಡರು ಇಂದು ನಗರದಲ್ಲಿ ಧರಣಿ ನಡೆಸಿದರು.

ಶನಿವಾರ ನಗರದ ಪುರಭವನದ ಮುಂಭಾಗ ಹಮ್ಮಿಕೊಂಡಿದ್ದ ಧರಣಿಯಲ್ಲಿ ಪಾಲ್ಗೊಂಡಿದ್ದ ಪರಿಸರ ರಕ್ಷಣೆಯ ಕಾರ್ಯಕರ್ತರು ಪಶ್ಚಿಮಘಟ್ಟ ಮತ್ತು ಕಾವೇರಿ ನದಿ ರಕ್ಷಣೆಗೆ ಕೂಡಲೆ ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಧರಣಿಯ ನೇತೃತ್ವವಹಿಸಿದ್ದ ಕ್ರಿಸ್ಪ್ ಸಂಘಟನೆಯ ಅಧ್ಯಕ್ಷ ಕುಮಾರ್ ಜಾಗೀರ್ದಾರ್ ಮಾತನಾಡಿ, ಪಶ್ಚಿಮಘಟ್ಟಗಳಲ್ಲಿ ಕೈಗಾರಿಕೆಗಳಿಗೆ ಸ್ಥಳಾವಕಾಶ ನೀಡುತ್ತಿರುವುದರಿಂದ ಅಪಾರ ಪ್ರಮಾಣದ ಅರಣ್ಯ ಸಂಪತ್ತು ನಾಶ ಆಗುತ್ತಿದೆ. ಪಶ್ಚಿಮ ಘಟ್ಟದಲ್ಲಿ ಪವರ್ ಪ್ಲಾಂಟ್ ನಿರ್ಮಾಣಕ್ಕೆ ಈಗಾಗಲೇ 50 ಸಾವಿರಕ್ಕೂ ಅಧಿಕ ಮರಗಳನ್ನು ಕತ್ತರಿಲಾಗಿದೆ. ಮರಗಳ ಹನನ ಹೀಗೆ ಮುಂದುವರೆದರೆ ಜೀವನದಿ ಕಾವೇರಿ ಸಂಪೂರ್ಣವಾಗಿ ಬತ್ತಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಬೆಂಗಳೂರು ಮತ್ತು ಕೊಡಗು ಮಧ್ಯೆ ರೈಲು ಮಾರ್ಗ ನಿರ್ಮಾಣಕ್ಕೆ ಪಶ್ಚಿಮಘಟ್ಟಗಳ ಅರಣ್ಯ ಪ್ರದೇಶದಲ್ಲಿ ಗುರುತಿಸಲಾಗಿದೆ. ಇದರಿಂದ ಅಪಾರ ಅರಣ್ಯ ಸಂಪತ್ತಿಗೆ ಕೊಡಲಿ ಪೆಟ್ಟು ಬೀಳಲಿದೆ. ಕೂಡಲೆ ಸರಕಾರ ಎಚ್ಚೆತ್ತುಕೊಂಡು ರೈಲು ಹಳಿ ನಿರ್ಮಾಣವನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.

ಪಶ್ಚಿಮಘಟ್ಟಗಳಲ್ಲಿ ಕೈಗಾರಿಕೆಗಳ ಸ್ಥಾಪನೆ, ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್‌ಗಳ ನಿರ್ಮಾಣಕ್ಕೆ ಸರಕಾರ ಯಾವುದೇ ಕಾರಣಕ್ಕೂ ಅನುಮತಿ ಕೊಡಬಾರದು ಎಂದು ಧರಣಿ ನಿರತರು ಒತ್ತಾಯಿಸಿದರು.

ಧರಣಿಯಲ್ಲಿ ಸಮಾಜಿಕ ಕಾರ್ಯಕರ್ತ ಅರುಣ್ ಪ್ರಸಾದ್, ಕೊಡವ ಸಮಾಜದ ನಾಯಕಿ ದೇವಿಕಾ ಹಾಗೂ ಹಸಿರುಮನೆ ಕ್ರಾಂತಿಯ ಸದಸ್ಯರು ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News