ಬಾಲಕಿಯ ಅತ್ಯಾಚಾರ, ಕೊಲೆ: ಮಹಿಳೆ ಸೇರಿ ಇಬ್ಬರು ಬಂಧನ
ಬೆಂಗಳೂರು, ಆ. 26: ಮನೆ ಮಾಲಕನಿಂದಲೇ ಅತ್ಯಾಚಾರಕ್ಕೊಳಗಾಗಿದ್ದ ಐದು ವರ್ಷದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಇಲ್ಲಿನ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಲಘಟ್ಟಪುರದ ಬಾಡಿಗೆ ಮನೆಯೊಂದರಲ್ಲಿ ಬೇರೆಯವರ ಪೋಷಣೆಯಲ್ಲಿದ್ದ ಐದು ವರ್ಷದ ಬಾಲಕಿ ಮೃತಪಟ್ಟಿದ್ದು, ಕೃತ್ಯವೆಸಗಿದ ಮನೆ ಮಾಲಕ ಮಲ್ಲಿಕಾರ್ಜುನ ಹಾಗೂ ಚಂದನಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಪತಿ ಅನಾರೋಗ್ಯದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ ಐದು ವರ್ಷದ ಬಾಲಕಿಯ ತಾಯಿ ಭಾಗ್ಯಮ್ಮ, ಮಗುವನ್ನು ಅನಾಥಾಶ್ರಮಕ್ಕೆ ಬಿಡಲು ಪ್ರಯತ್ನಿಸಿದ್ದರು. ಆದರೆ, ಆಕೆಗೆ ಪರಿಚಯವಾದ ಆರೋಪಿ ಚಂದನಾ ಮಗುವನ್ನು ನೋಡಿಕೊಳ್ಳುವುದಾಗಿ ಹೇಳಿ ತಾನಿದ್ದ ಬಾಡಿಗೆ ಮನೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿದುಬಂದಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕಿ, ಮನೆಯಲ್ಲಿ ಮಲ, ಮೂತ್ರ ವಿಸರ್ಜನೆ ಮಾಡುತ್ತಿದ್ದು, ಇದರಿಂದ ಆಕ್ರೋಶಗೊಳ್ಳುತ್ತಿದ್ದ ಚಂದನಾ, ಮಗುವಿಗೆ ಮೇಣದಬತ್ತಿಯ ಹನಿಯನ್ನು ಹಾಕುವುದು, ಹೊಡೆಯುವುದು, ಇನ್ನಿತರ ಹಿಂಸೆ ಕೊಡುತ್ತಿದ್ದ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಚಂದನಾ ಜತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ಮನೆ ಮಾಲಕ ಮಲ್ಲಿಕಾರ್ಜುನ, ಈ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದು, ಅಸ್ವಸ್ಥಗೊಂಡ ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಶನಿವಾರ ಮುಂಜಾನೆ ಮೃತಪಟ್ಟಿರುವುದಾಗಿ ಮೂಲಗಳು ತಿಳಿಸಿವೆ.
ಘಟನೆ ಸಂಬಂಧ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಈ ಬಗ್ಗೆ ಮೊಕದ್ದಮೆ ದಾಖಲಿಸಿ ಕೊಂಡಿರುವ ತಲಘಟ್ಟಪುರ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.