×
Ad

ಜನತೆ ಸೂಚಿಸುವ ಅಭ್ಯರ್ಥಿ ಚುನಾವಣೆಗೆ ಸ್ಪರ್ಧಿಸಲಿ: ಎಚ್.ಎಸ್.ದೊರೆಸ್ವಾಮಿ

Update: 2017-08-26 20:07 IST

ಬೆಂಗಳೂರು, ಆ.26: ರಾಜಕೀಯ ಪಕ್ಷಗಳು ಚುನಾವಣಾ ಸ್ಪರ್ಧೆಗೆ ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಜನರ ಅಭಿಪ್ರಾಯಕ್ಕೆ ಆದ್ಯತೆ ಕೊಡಬೇಕು ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ತಿಳಿಸಿದ್ದಾರೆ.

ಶನಿವಾರ ಆಮ್‌ ಆದ್ಮಿ ಪಕ್ಷದ ವತಿಯಿಂದ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ಆಪ್ ನಾಗರಿಕ ಸಂಬಲೀಕರಣ’ ಕಾರ್ಯಕ್ರಮ ಹಾಗೂ ‘ಜನರಿಂದ ಸರಕಾರ-ಒಂದು ಸಂವಾದ’ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಜಕೀಯ ಪಕ್ಷಗಳು ಹೈ ಕಮಾಂಡ್‌ಗೆ ಜೋತು ಬಿದ್ದು, ಅವರು ಸೂಚಿಸುವ ವ್ಯಕ್ತಿಗಳೇ ಚುನಾವಣಾ ಅಭ್ಯರ್ಥಿಗಳಾಗುತ್ತಿದ್ದಾರೆ. ಈ ವ್ಯಕ್ತಿಗಳು ಚುನಾವಣೆಯಲ್ಲಿ ಆಯ್ಕೆಯಾದರೆ ಜನತೆಗಿಂತ ಪಕ್ಷ ಹಾಗೂ ಪಕ್ಷದ ಹೈಕಮಾಂಡ್ ಮುಖ್ಯವಾಗುತ್ತದೆ. ಇಂತಹ ಅಭ್ಯರ್ಥಿಗಳಿಂದ ಏನನ್ನು ನಿರೀಕ್ಷಿಸಲು ಆಗುವುದಿಲ್ಲ ಎಂದು ಹೇಳಿದರು.

ರಾಜಕೀಯ ವ್ಯವಸ್ಥೆ ವಿಕೇಂದ್ರಿಕರಣಗೊಂಡಷ್ಟು ಅಧಿಕಾರ ಹಾಗೂ ಸೌಲಭ್ಯಗಳು ಜನಸಾಮಾನ್ಯರಿಗೆ ತಲುಪಲು ಸಾಧ್ಯವಾಗುತ್ತದೆ. ಈ ದೃಷ್ಟಿಯಿಂದ ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ವಿಕೇಂದ್ರಿಕರಣಕ್ಕೆ ಆದ್ಯತೆ ಕೊಟ್ಟು ಗ್ರಾಮ ಪಂಚಾಯತ್ ವ್ಯವಸ್ಥೆ ಜಾರಿಗೆ ತರಲಾಯಿತು. ಆದರೆ, ಈ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಇಲ್ಲಿಯವರೆಗೂ ಸಾಧ್ಯವಾಗಿಲ್ಲ. ಹೀಗಾಗಿ ಗ್ರಾಮ ಪಂಚಾಯತ್ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಟಗೊಳಿಸುವ ಅಗತ್ಯವಿದೆ ಎಂದರು.

ಬೀದಿ ವ್ಯಾಪಾರಿಗಳ ಸಂಘದ ಮುಖಂಡ ವಿನಯ್ ಶ್ರೀನಿವಾಸ್ ಮಾತನಾಡಿ, ಇವತ್ತು ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ನಗರಗಳು ಬೃಹತ್ ಕಟ್ಟಡಗಳೊಂದಿಗೆ ಶೃಂಗಾರಗೊಂಡಿರುವುದಕ್ಕೆ, ಶುಚಿಯಾಗಿರುವುದಕ್ಕೆ ನಮ್ಮ ಕಟ್ಟಡ ಕಾರ್ಮಿಕರು ಹಾಗೂ ಪೌರ ಕಾರ್ಮಿಕರೇ ಕಾರಣರಾಗಿದ್ದಾರೆ. ಆದರೆ, ನಮ್ಮ ವ್ಯವಸ್ಥೆಯಲ್ಲಿ ಅವರಿಗೇ ಗೌರವವಿಲ್ಲವಾಗಿದೆ ಎಂದು ವಿಷಾದಿಸಿದರು.

ಬೆಂಗಳೂರು ನಗರದಲ್ಲಿ ಬಡವರು ಸ್ವಾಭಿಮಾನದಿಂದ ಬದುಕನ್ನು ನಡೆಸಲು ದುಸ್ಥರವಾಗುವ ಮಟ್ಟಕ್ಕೆ ಮುಟ್ಟಿದೆ. ಹತ್ತಾರು ವರ್ಷಗಳಿಂದ ಬೀದಿ ವ್ಯಾಪಾರ ಮಾಡಿಕೊಂಡು ಬದುಕುತ್ತಿದ್ದ ಜನತೆಗೆ ಶ್ರೀಮಂತರು ಕಿರುಕುಳ ನೀಡುತ್ತಾರೆ. ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವ ವ್ಯಾಪಾರಿಗಳ ಮೇಲೆ ನೀರು ಸುರಿಯುವುದು, ಕಸ ಹಾಕುವುದು ಸೇರಿದಂತೆ ಹಲವಾರು ರೀತಿಯಲ್ಲಿ ಹಿಂಸೆಯನ್ನು ನೀಡುತ್ತಾರೆ ಎಂದ ಅವರು,  ಬೆಂಗಳೂರಿನಲ್ಲಿ ಕೇವಲ ಹಣಕ್ಕೆ ಪ್ರಾಮುಖ್ಯತೆ ಇದೆಯೇ ಹೊರತು ಮಾನವೀಯ ಮೌಲ್ಯಗಳಿಗೆ ಇಲ್ಲವಾಗಿದೆ. ಪೌರ ಕಾರ್ಮಿಕರನ್ನು ಕಸಕ್ಕಿಂತ ಕಡೆಯಾಗಿ ಕಾಣಲಾಗುತ್ತದೆ. ಆದರೆ, ಅವರಿಂದ ಇಡೀ ಬೆಂಗಳೂರು ಸ್ವಚ್ಚವಾಗಿರಬೇಕೆಂದು ನಿರೀಕ್ಷಿಸಲಾಗುತ್ತದೆ. ಇಂತಹ ಸಂಕುಚಿತ ಮನಸ್ಥಿತಿಯನ್ನು ನಗರದ ಜನತೆ ಹೊರ ಬಂದು ಇಲ್ಲಿರುವ ಪ್ರತಿಯೊಬ್ಬರಿಗೂ ಸಮಾನ ರೀತಿಯ ಗೌರವ, ಸವಲತ್ತುಗಳು ಸಿಗುವಂತಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಶ್ರೀನಿವಾಸ್ ಜಿ.ಕಪ್ಪಣ್ಣ, ಸಿವಿಕ್ ಸಂಸ್ಥೆಯ ಕಾತ್ಯಾಯನಿ ಚಾಮರಾಜ್ ಸೇರಿದಂತೆ ಹಲವು ಮುಖ್ಯಸ್ಥರು ಭಾಗ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News