×
Ad

'ಸುಗ್ರೀವಾಜ್ಞೆ' ಬಗ್ಗೆ ರಾಜ್ಯಪಾಲರಿಗೆ ವಿವರಣೆ: ಕಾನೂನು ಸಚಿವ ಜಯಚಂದ್ರ

Update: 2017-08-28 18:19 IST

ಬೆಂಗಳೂರು, ಆ. 28: ಎಸ್ಸಿ, ಎಸ್ಟಿ ವರ್ಗದವರ ಭಡ್ತಿ ಮೀಸಲಾತಿ ಕುರಿತಂತೆ ರಾಜ್ಯಪಾಲರು ಕೆಲ ಅಂಶಗಳ ಕುರಿತು ವಿವರಣೆ ಕೋರಿದ್ದು, ಆ ಸಂಬಂಧ ಸಂಪೂರ್ಣ ಮಾಹಿತಿಯನ್ನು ರಾಜ್ಯಪಾಲರಿಗೆ ರವಾನಿಸಲಾಗಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ಸೋಮವಾರ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಡ್ತಿ ಮೀಸಲಾತಿ ಸಂಬಂಧ ರಾಜ್ಯ ಸರಕಾರ ಹೊರಡಿಸಿದ್ದ ಸುಗ್ರೀವಾಜ್ಞೆ ಬಗ್ಗೆ ನಾಳೆ ಖುದ್ದಾಗಿ ತಾವು ರಾಜ್ಯಪಾಲರನ್ನು ಭೇಟಿ ಮಾಡಿ ಮತ್ತಷ್ಟು ವಿವರಗಳನ್ನು ಒದಗಿಸಿ ಸುಗ್ರೀವಾಜ್ಞೆಗೆ ಒಪ್ಪಿಗೆ ನೀಡಬೇಕೆಂದು ಮನವಿ ಮಾಡುತ್ತೇನೆ ಎಂದು ನುಡಿದರು.

ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವ ವಿದ್ಯಾಲಯದ ತಿದ್ದುಪಡಿ ವಿಧೇಯಕ ಕುರಿತಂತೆ ರಾಜ್ಯದ ಅಡ್ವೋಕೇಟ್ ಜನರಲ್ ಪರಿಶೀಲನೆ ಮಾಡುತ್ತಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದ ನೂತನ ನಿಯಮದಂತೆ ಒಂದು ಹಾಗೂ ಐದರ ಅನುಪಾತದಡಿ ಸಂದರ್ಶನಕ್ಕೆ ಕರೆಯಲು ತಿದ್ದುಪಡಿ ಮಾಡಿದ್ದು, ಆ ಮಸೂದೆಗೆ ಒಪ್ಪಿಗೆ ನೀಡಬೇಕೆಂದು ರಾಜ್ಯಪಾಲರಿಗೆ ವಿವರಣೆ ಸಲ್ಲಿಸಲಾಗಿದೆ ಎಂದರು.

ರಸಗೊಬ್ಬರ ಕಾಪು ದಾಸ್ತಾನಿಗೆ ಸಹಕಾರ ಮಾರಾಟ ಮಹಾ ಮಂಡಳಿಯ ಬ್ಯಾಂಕುಗಳಿಂದ 500 ಕೋಟಿ ರೂ.ಬಂಡವಾಳ ಸಾಲಕ್ಕೆ ರಾಜ್ಯ ಸರಕಾರ ಖಾತ್ರಿ ಹಾಗೂ ರಾಯಚೂರು ಜಿಲ್ಲಾ ಕಚೇರಿಗಳ ಸಂಕೀರ್ಣ ಕಟ್ಟಡ ಕಾಮಗಾರಿ ನಿರ್ಮಾಣ ಮಾಡಲು 25 ಕೋಟಿ ರೂ.ಅಂದಾಜು ಪಟ್ಟಿಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ವಿವರ ನೀಡಿದರು.

ದಾವಣಗೆರೆ ಮತ್ತು ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಹಂಚಿಕೆ ಮಾಡಿರುವ ಸರ್ ಮಿರ್ಜಾ ಇಸ್ಮಾಯೀಲ್ ನಗರ ಬಡಾವಣೆಯಲ್ಲಿನ ದರ ನಿಗಧಿಗೆ ಸಂಪುಟ ಅನುಮತಿ ನೀಡಿದೆ. ಗಜೇಂದ್ರಗಡ್-ನರೇಗಲ್ ಮತ್ತು ರೋಣ ಪಟ್ಟಣಕ್ಕೆ ನೀರು ಸರಬರಾಜು ಮಾಡಲು ಹಾಲಿ ಗುತ್ತಿಗೆದಾರ ಮೆಗಾ ಇಂಜಿನಿಯರಿಂಗ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆಯಿಂದ 60.45 ಕೋಟಿ ರೂ. ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದರು.

ಕೃಷ್ಣಾಭಾಗ್ಯ ಜಲ ನಿಗಮಕ್ಕೆ ಐಐಬಿಆರ್ ವತಿಯಿಂದ 1,500 ಕೋಟಿ ರೂ. ಹಣವನ್ನು ಸಾಲ ಮೂಲಕ ಸಂಗ್ರಸಲು ಸಂಪುಟ ಅನುಮತಿ ನೀಡಿದೆ. ಕೊಳ್ಳೆಗಾಲ ತಾಲೂಕಿನ ಸರ್ ಕಾಟನ್ ಕಾಲುವೆ, ಹಂಪಾಪುರ ಕಾಲುವೆ ಮತ್ತು ಗುಪ್ಪಮ್ಮ ಕಾಲುವೆಗಳನ್ನು ಅಭಿವೃದ್ಧಿಪಡಿಸುವ ಕಾಮಗಾರಿ ಅಂದಾಜು 20.30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಒಪ್ಪಿಗೆ ನೀಡಿದೆ ಎಂದ ಅವರು,  ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ ಅಮಾನಿ ಕೆರೆಯಿಂದ ಏತ ನೀರಾವರಿ ಮೂಲಕ ನೀರನ್ನು ಎತ್ತಿ 25 ಕೆರೆಗಳಿಗೆ 70 ಕೋಟಿ ರೂ. ವೆಚ್ಚದಲ್ಲಿ ನೀರು ತುಂಬಿಸಲು ಸಂಪುಟ ಅನುಮೋದನೆ ನೀಡಿದೆ. ಮುಲ್ಲಾಮಾರಿ ಯೋಜನೆಯ ಬಲದಂಡೆ ಕಾಲುವೆಯ ಹಾಗೂ ಕಾಲುವೆ ಜಾಲ 117 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಮಾಹಿತಿ ನೀಡಿದರು.

ಮೈಸೂರು ಜಿಲ್ಲೆಯ ಹೆಗ್ಗಡ ದೇವನಕೋಟೆ ತಾಲೂಕಿನ ಸರಗೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಬಿಡಗಲ್ಲು ಗ್ರಾಮದಲ್ಲಿರುವ ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ನಾಲ್ಕು ಎಕರೆ ಪ್ರದೇಶವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ನಿರ್ಮಾಣ ಮಾಡಲು ಶಿಕ್ಷಣ ಇಲಾಖೆಗೆ ಉಚಿತವಾಗಿ ಭೂಮಿ ಹಸ್ತಾಂತರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಅಲ್ಲದೆ, ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿ ಮಹಾರಾಷ್ಟ್ರ ಮಾದರಿಯಲ್ಲಿಯೇ ಅಂತರ್ಜಲ ಅಭಿವೃದ್ಧಿ ಪಡಿಸುವ ವಿಶೇಷ ಯೋಜನೆಯನ್ನು 20.59 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಸಂಪುಟ ಅನುಮೋದನೆ ನೀಡಿದೆ ಎಂದು ಜಯಚಂದ್ರ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News