ಯಡಿಯೂರಪ್ಪ ಮನೆಯಲ್ಲಿ ದಲಿತ ಕುಟುಂಬಗಳಿಗೆ ಹೋಳಿಗೆ ಊಟ

Update: 2017-08-28 13:28 GMT

ಬೆಂಗಳೂರು, ಆ.28: ಜನಸಂಪರ್ಕ ಅಭಿಯಾನದ ವೇಳೆ ತನಗೆ ಆತಿಥ್ಯ ನೀಡಿದ್ದ ದಲಿತ ಕುಟುಂಬಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತನ್ನ ಮನಗೆ ಬರಮಾಡಿಕೊಂಡು ಹೋಳಿಗೆ ಊಟ ಹಾಕಿ ಸತ್ಕರಿಸಿದರು.

ಸೋಮವಾರ ನಗರದ ಡಾಲರ್ಸ್‌ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ 33 ದಲಿತ ಕುಟುಂಬದ ಸದಸ್ಯರು ಆಗಮಿಸಿದರು. ಈ ವೇಳೆ ಯಡಿಯೂರಪ್ಪ, ಪಕ್ಷದ ಕಾರ್ಯಕರ್ತರು ಹಾಗೂ ಮನೆಯ ಸದಸ್ಯರು ಅತಿಥಿಗಳನ್ನು ನಗುಮುಖದಿಂದ ಬರಮಾಡಿಕೊಂಡು, ಊಟ ಉಪಚಾರ ಮಾಡಿದರು.

ಹೋಳಿಗೆ ಊಟ: ಮನೆಗೆ ಬರುವ ಅತಿಥಿಗಳಿಗಾಗಿ ಯಡಿಯೂರಪ್ಪ ಮನೆಯಲ್ಲಿಯೇ ಊಟವನ್ನು ಸಿದ್ಧಪಡಿಸಿದ್ದರು. ಹೋಳಿಗೆ, ಪಲಾವ್, ಅನ್ನ ಸಂಬಾರ್, ಜಾಂಗೀರನ್ನು ತಯಾರಿಸಲಾಗಿತ್ತು. ಪ್ರಯಾಣದ ಕುಶಲೋಪಚರ ವಿಚಾರಿಸಿದ ಬಳಿಕ ಯೂಡಿರಪ್ಪ ತಮ್ಮ ಜೊತೆಯಲ್ಲಿಯೇ ದಲಿತ ಕುಟುಂಬಗಳನ್ನು ಊಟಕ್ಕೆ ಆಹ್ವಾನಿಸಿದರು. ಊಟದ ನಂತರ ಅತಿಥಿಗಳಿಗೆ ಸೀರೆ ಹಾಗೂ ಪಂಚೆಯನ್ನು ಉಡುಗೊರೆಯಾಗಿ ನೀಡಲಾಯಿತು.

ಈ ವೇಳೆ ಮಾತನಾಡಿದ ಯಡಿಯೂರಪ್ಪ, ಜನಸಂಪರ್ಕ ಅಭಿಯಾನದ ವೇಳೆ ದಲಿತರ ಮನೆಗಳಿಗೆ ಕೇವಲ ಊಟಕ್ಕೆ ಹೋಗಲಿಲ್ಲ. ಅವರ ನಿಜವಾದ ಸ್ಥಿತಿಯನ್ನು ತಿಳಿಯಬೇಕಾಗಿತ್ತು. ಹೀಗಾಗಿ ಅವರಿಗೆ ಮನೆಗೆ ಭೇಟಿ ನೀಡಿದೆ. ಸ್ವಾತಂತ್ರ ಬಂದು 70 ವರ್ಷಗಳು ಕಳೆದರು ದಲಿತ ಸಮುದಾಯ ಕನಿಷ್ಠ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ಕುರಿತು ಅರಿವಿಗೆ ಬಂತು ಎಂದು ವಿಷಾದಿಸಿದರು.

ದಲಿತ ಸಮುದಾಯದ ಉದ್ದೇಶಪೂರ್ವಕವಾಗಿ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಶಿಕ್ಷಣ ಕುರಿತು ಹೆಚ್ಚಿನ ಜಾಗೃತಿಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ವತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ದಲಿತ ಸಮುದಾಯದ ಮುಂದಿನ ಪೀಳಿಗೆಯನ್ನು ಆರ್ಥಿಕವನ್ನು ಸದೃಢರನ್ನಾಗಿ ಮಾಡಬೇಕಾಗಿದೆ ಎಂದು ತಿಳಿಸಿದರು.

ನನ್ನ ಆಡಳಿತಾವಧಿಯಲ್ಲಿ ಹೆಣ್ಣು ಮಕ್ಕಳಿಗೆ ಭಾಗ್ಯ ಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದೆ. ಇದರ ಪ್ರಯೋಜನ ಈಗ ತಿಳಿಯುವುದಿಲ್ಲ. ಹೆಣ್ಣು ಮಕ್ಕಳಗೆ 18ವರ್ಷದ ನಂತರ ಅವರ ಖಾತೆಗೆ 2 ಲಕ್ಷ ರೂ.ಹೆಚ್ಚು ಹಣ ಬರಲಿದೆ. ಆಗ ನಾನು ಮಾಡಿದ ಜನಪರ ಯೋಜನೆಯ ಕುರಿತು ಜನತೆಗೆ ತಿಳಿಯಲಿದೆ ಎಂದು ಹೇಳಿದರು.

ಚಿತ್ರದುರ್ಗ ಜಿಲ್ಲೆಯ ಬಸವ ಮೂರ್ತಿ ಮಾದಾರ ಚೆನ್ನಯ್ಯ ಮಾತನಾಡಿ, 12ನೆ ಶತಮಾನದಲ್ಲಿ ಬಸವಣ್ಣ ಮತ್ತು ಮಾದಾರ ಚೆನಯ್ಯ ಅನ್ಯೋನ್ಯತೆಯ ದ್ಯೋತಕವಾಗಿದ್ದರು. ಇದನ್ನು ಮುಂದುವರೆಸುವ ನಿಟ್ಟಿನಲ್ಲಿ ಯಡಿಯೂರಪ್ಪ ಮುಂದಾಗಿರುವುದು ಸಂತಸ ತಂದಿದೆ ಎಂದು ತಿಳಿಸಿದರು.

ದಲಿತರ ಮೇಲೆ ದೌರ್ಜನ್ಯವಾಗುತ್ತಿರುವುದು ಹಿಂದುಳಿದ ಜಾತಿಗಳಿಂದಲೇ ಹೊರತು ಮೇಲ್ವರ್ಗದವರಿಂದಲ್ಲ. ಕೇವಲ ತಮ್ಮ ಅಧಿಕಾರದ ಲಾಲಸೆಗಾಗಿ ದಲಿತರನ್ನು ಬಳಕೆ ಮಾಡಿಕೊಳ್ಳುವ ಮನಸ್ಥಿತಿಗಳು ಹೆಚ್ಚಾಗುತ್ತಿದೆ. ಈ ಬಗ್ಗೆ ದಲಿತ ಸಮುದಾಯಕ್ಕೆ ಚೆನ್ನಾಗಿ ಅರಿವಿದೆ ಎಂದ ಅವರು, ಹಿಂದುಳಿದ ಹಾಗೂ ದಲಿತ ಸಮುದಾಯದ ಹರಿಕಾರನೆಂದು ಬಿಂಬಿಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ದಲಿತ ಸಮುದಾಯ ಅಧಿಕಾರಿ ರತ್ನಪ್ರಭಾರನ್ನು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಯಾಕೆ ನೇಮಿಸಿಲ್ಲ. ಕೇವಲ ಮಾತಿನಲ್ಲಿ ದಲಿತ ಪರ ಘೋಷಣೆಗಳನ್ನು ಕೂಗುವುದರಿಂದ ಯಾವುದೇ ಪ್ರಯೋಜವಾಗುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಗೋವಿಂದ ಕಾರಜೋಳ, ಶೋಭಾ ಕರಂದ್ಲಾಜೆ, ಎ.ನಾರಾಯಣ ಸ್ವಾಮಿ, ಶಾಸಕ ಬಿ.ವೈ.ರಾಘವೇಂದ್ರ, ವಿಧಾನಪರಿಷತ್ ಸದಸ್ಯ ಡಿ.ಎಸ್.ವೀರಯ್ಯ, ಮುಖಂಡರಾದ ಕೆ. ಶಿವರಾಂ, ಬಿ.ಜೆ.ಪುಟ್ಟಸ್ವಾಮಿ ಮತ್ತಿತರರಿದ್ದರು.

ನಾನು ದಲಿತ ಮನೆಗಳಿಗೆ ಭೇಟಿ ನೀಡಿದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸುವುದು ಅವರಿಗೆ ಶೋಭೆ ತರುವುದಿಲ್ಲ. ನಾನಾದರು ದಲಿತರ ಮನೆಗೆ ಹೋಗಿದ್ದೇನೆ. ಹಾಗೂ ಅವರನ್ನು ಕರೆದು ಸತ್ಕರಿಸಿದ್ದೇನೆ. ಆದರೆ, ಸಿದ್ದರಾಮಯ್ಯ ಎಂದಾದರು ದಲಿತರನ್ನು ತಮ್ಮ ಮನೆಗಳಿಗೆ ಬರಮಾಡಿಕೊಂಡಿದ್ದಾರೆಯೇ.

 ಬಿ.ಎಸ್.ಯಡಿಯೂರಪ್ಪ 

ಬಿಜೆಪಿ ರಾಜ್ಯಾಧ್ಯಕ್ಷ ಹಾಸನದಲ್ಲಿರುವ ನನ್ನ ಮನೆಗೆ ಯಡಿಯೂರಪ್ಪ ಬಂದಿದ್ದರು. ಅವರ ಊಟಕ್ಕೆ ಹೋಳಿಗೆ, ರೊಟ್ಟಿ, ಹುಚ್ಚೆಳ್ಳು ಚಟ್ನಿ ಮಾಡಿದ್ದೆ. ಅವರು ನನ್ನ ಮನೆಗೆ ಬಂದಿದ್ದು ತುಂಬಾ ಸಂತೋಷವಾಗಿತ್ತು. ಆದರೆ, ಅವರ ಮನೆಗೆ ನಮ್ಮನ್ನು ಕರೆಸುತ್ತಾರೆಂದು ಕನಸಿನಲ್ಲಿಯೇ ಅಂದುಕೊಂಡಿರಲಿಲ್ಲ. ನಮ್ಮನ್ನು ಕರೆದು ಊಟ ಹಾಕಿ ಸತ್ಕರಿಸಿದ ಈ ಘಟನೆಯನ್ನು ಎಂದಿಗೂ ಮರೆಯುವುದಿಲ್ಲ.

-ರುಕ್ಮಿಣಿ ದಲಿತ ಮಹಿಳೆ ಹಾಸನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News