×
Ad

ಆತ್ಯಾಧುನಿಕ ಕೃಷಿ ಉಪಕರಣಗಳನ್ನು ರೈತರಿಗೆ ಒದಗಿಸಲಿ: ರಾಜ್ಯಪಾಲ ವಜುಭಾಯಿ ವಾಲಾ

Update: 2017-08-28 19:02 IST

ಬೆಂಗಳೂರು, ಆ. 28: ಬೆಳೆ ನಷ್ಟ ತಪ್ಪಿಸಲು ಅಗ್ಗದ ದರದಲ್ಲಿ ಆತ್ಯಾಧುನಿಕ ಕೃಷಿ ಉಪಕರಣಗಳನ್ನು ರೈತರಿಗೆ ಒದಗಿಸಲು ಸರಕಾರ ಮುಂದಾಗಲಿ ಎಂದು ರಾಜ್ಯಪಾಲ ವಜುಭಾಯ್ ವಾಲಾ ಹೇಳಿದ್ದಾರೆ.

ಸೋಮವಾರ ನಗರದ ತುಮಕೂರು ರಸ್ತೆಯಲ್ಲಿರುವ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಮೀಡಿಯಾ ಟುಡೇ ಗ್ರೂಪ್ ಸಹಯೋಗದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಹಮ್ಮಿಕೊಂಡಿರುವ ‘ಕೃಷಿ ತಂತ್ರಜ್ಞಾನ ಮತ್ತು ಫುಡೆಕ್ಸ್-2017’ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿಯಲ್ಲಿ ಯಾಂತ್ರೀಕರಣ ಹೆಚ್ಚಾದ ಬಳಿಕ ಖಾಸಗಿ ಕಂಪೆನಿಗಳು ಕೃಷಿ ಉಪಕರಣಗಳ ಉತ್ಪಾದನೆಗೆ ಹೆಚ್ಚು ಒತ್ತು ನೀಡುತ್ತಿವೆ. ಈ ಪೈಪೋಟಿಯಲ್ಲಿ ಕೃಷಿ ಯಂತ್ರಗಳ ಬೆಲೆಯು ಗಗನಕ್ಕೇರಿದೆ. ಇದರಿಂದ ಕೆಳ ಮತ್ತು ಮಧ್ಯಮ ಹಂತದ ಕೃಷಿಕರಿಗೆ ಕೃಷಿ ಉಪಕರಣಗಳು ಗಗನ ಕುಸುಮವಾಗಿವೆ ಎಂದರು.

ಬೆಳೆ ನಷ್ಟವನ್ನು ತಪ್ಪಿಸಲು ಅಗ್ಗದ ಬೆಲೆಯಲ್ಲಿ ರೈತರಿಗೆ ಅತ್ಯಾಧುನಿಕ ಕೃಷಿ ಉಪಕರಣಗಳನ್ನು ಪೂರೈಸುವ ಕೆಲಸ ಆಗಬೇಕಿದೆ. ಸರಕಾರಗಳು ಈ ಕುರಿತು ಹೆಚ್ಚು ಗಮನ ಹರಿಸಬೇಕು. ಸುಲಭ ನಿರ್ವಹಣೆಯ ಉಪಕರಣಗಳನ್ನು ರೈತರಿಗೆ ಒದಗಿಸುವುದರಿಂದ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು.

ಮೀಡಿಯಾ ಟುಡೇ ಗ್ರೂಪ್ ಮುಖ್ಯ ಸಮನ್ವಯಾಧಿಕಾರಿ ಎಸ್.ಜಾಫರ್ ನಖ್ವಿ ಮಾತನಾಡಿ, ಕೃಷಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ನೀಡುವ ಸುಧಾರಿತ ತಂತ್ರಜ್ಞಾನದ ಯಂತ್ರೋಪಕರಣಗಳ ಬಳಕೆ ಬಗ್ಗೆ ಮೇಳದಲ್ಲಿ ಮಾಹಿತಿ ನೀಡಲಾಗುತ್ತದೆ. ಕೃಷಿ ಕ್ಷೇತ್ರದ ಹೊಸ ಆವಿಷ್ಕಾರ, ಸುಧಾರಿತ ಯಂತ್ರೋಪಕರಣ ಪರಿಚಯಿಸುವುದು ಮೇಳದ ಉದ್ದೇಶ. ಸಂಸ್ಕರಿತ ಆಹಾರ ತಯಾರಿಕೆ ಬಗ್ಗೆಯೂ ಮಾಹಿತಿ ಸಿಗಲಿದೆ ಎಂದರು.

ಆ.28ರಿಂದ ಮೂರು ದಿನಗಳ ಕಾಲ ನಡೆಯುವ ಮೇಳದಲ್ಲಿ ಚೀನಾ, ಜಪಾನ್, ಕೊರಿಯಾ, ತೈವಾನ್ ಸೇರಿದಂತೆ 30ಕ್ಕೂ ಹೆಚ್ಚು ರಾಷ್ಟ್ರಗಳು ಪಾಲ್ಗೊಳ್ಳಲಿವೆ. 400ಕ್ಕೂ ಹೆಚ್ಚು ಪ್ರದರ್ಶನಕಾರರು ಭಾಗವಹಿಸಲಿದ್ದಾರೆ. 45,000ಕ್ಕೂ ಹೆಚ್ಚು ಮಂದಿ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಆಯುಕ್ತ ಜಿ.ಸತೀಶ್, ಎಫ್‌ಕೆಸಿಸಿಐ ಅಧ್ಯಕ್ಷ ಕೆ.ರವಿ, ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ, ಮೀಡಿಯಾ ಟುಡೇ ಸಿಇಒ ಎಂ.ಬಿ.ನಖ್ವಿ ಸೇರಿ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News