×
Ad

ಹೊಸ ತಾಲೂಕುಗಳ ರಚನೆಗೆ ಸಂಪುಟ ಅಸ್ತು: ಸಚಿವ ಜಯಚಂದ್ರ

Update: 2017-08-28 19:17 IST

ಬೆಂಗಳೂರು, ಆ. 28: ಆಯವ್ಯಯದಲ್ಲಿ ಪ್ರಕಟಿಸಿದಂತೆ ರಾಜ್ಯದ 49 ಹೊಸ ತಾಲೂಕುಗಳ ರಚನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಹೊಸ ತಾಲೂಕುಗಳ ಗಡಿ ವಿಚಾರದ ಸಂಪೂರ್ಣ ವಿವರವನ್ನು ಜಿಲ್ಲಾಡಳಿತ ನೀಡಿದ ಬಳಿಕ ಅಧಿಕೃತ ಆದೇಶ ಹೊರಡಿಸಲು ಸಂಪುಟ ಸಭೆ ನಿರ್ಧರಿಸಿದೆ ಎಂದು ಕಾನೂನು ಸಚಿವ ಜಯಚಂದ್ರ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಸ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  2017-18ರ ಆಯವ್ಯಯದಲ್ಲಿ ಘೋಷಿಸಿದಂತೆ ಹೊಸ ತಾಲೂಕುಗಳ ರಚನೆಗೆ ಕ್ರಮ ವಹಿಸಲಾಗಿದೆ ಎಂದರು.

ಉಚಿತ ನೀರು ಪೂರೈಕೆ: ಬೆಂಗಳೂರು ನಗರದ ಎ.ಕೆ.ಕಾಲನಿ ನಿವಾಸಿಗಳ 7,612 ಅನಧಿಕೃತ ಸಂಪರ್ಕಗಳ ನೀರಿನ ಬಾಕಿ ಹಾಗೂ ಅದರ ಬಡ್ಡಿ ಸೇರಿದಂತೆ 12.93 ಕೋಟಿ ರೂ.ಮನ್ನಾ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಹೇಳಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳ ಮತ್ತು ಆಶ್ರಯ ಶಾಲೆಗಳ ವಿದ್ಯಾರ್ಥಿಗಳಿಗೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಯಿಂದ 6.50 ಕೋಟಿ ರೂ.ವೆಚ್ಚದಲ್ಲಿ ಕಿಟ್‌ಗಳನ್ನು ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಬೆಂಗಳೂರು-ನೆಲಮಂಗಲ ರಾಷ್ಟ್ರೀಯ ಹೆದ್ದಾರಿ 48ರ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಹಾದು ಹೋಗುವ ಸ್ಥಳದಲ್ಲಿ 165 ಕೋಟಿ ರೂ.ವೆಚ್ಚದಲ್ಲಿ ಕೆಳ ಸೇತುವೆ ನಿರ್ಮಾಣ ಮಾಡಲು ಸಂಪುಟ ಸಮ್ಮತಿಸಿದೆ ಎಂದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಸುಬೇದಾರ್ ಛತ್ರಂ ರಸ್ತೆ, ಗುಬ್ಬಿ ವೀರಣ್ಣ ರಸ್ತೆ, ಧನ್ವಂತರಿ ರಸ್ತೆ, ಕೃಷ್ಣ ರಾಜೇಂದ್ರ ಮಾರುಕಟ್ಟೆ ಸೇರಿದಂತೆ ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ 105 ಕೋಟಿ ರೂ.ಅಂದಾಜು ವೆಚ್ಚಕ್ಕೆ ಸಂಪುಟ ಅನುಮೋದನೆ ನೀಡಿದೆ. ಅದೇ ರೀತಿ ಬಿಬಿಎಂಪಿ ಪ್ಯಾಕೇಜ್ ಒಂದರಡಿ 292 ಕೋಟಿ ರೂ.ವೆಚ್ಚದಲ್ಲಿ ವೈಟ್ ಟ್ಯಾಪಿಂಗ್ ಮಾಡಲು ಸಂಪುಟ ಸಮ್ಮತಿಸಿದೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News