ಅನುಪಯುಕ್ತ ಔಷಧಿ ಮಾರಾಟ: ಮಾಲಕರಿಗೆ ಶಿಕ್ಷೆ, ದಂಡ
ಬೆಂಗಳೂರು, ಆ.28: ಔಷಧಿ ಅಂಗಡಿ ಮತ್ತು ಮಾಲಕರು ಹಾಗೂ ಪಾಲುದಾರರು ಎಸಗಿರುವ ತಪ್ಪುಗಳು ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ರಾಜ್ಯದ ಹಲವು ಔಷಧಿ ಅಂಗಡಿಗಳಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ಹೋರಡಿಸಿದೆ.
ವಿವಿಧ ಜಿಲ್ಲೆಗಳ ಔಷಧಿ ಅಂಗಡಿಗಳು, ಮಾಲಕರು ಮತ್ತು ಪಾಲುದಾರರ ಮೇಲೆ ಹಲವು ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲು ಏರಿದ್ದವು. ಅದರಂತೆ, ಇತ್ತೀಚೆಗೆ ವಿವಿಧ ಹಂತದ ನ್ಯಾಯಾಲಯಗಳು ತಮ್ಮ ತೀರ್ಪನ್ನು ಪ್ರಕಟಿಸಿವೆ ಎಂದು ಔಷಧ ನಿಯಂತ್ರಣ ಇಲಾಖೆ ತಿಳಿಸಿದೆ.
ವೈದ್ಯರ ಸಲಹಾ ಚೀಟಿ ಇಲ್ಲದೆ ಔಷಧ ಮತ್ತು ಕಾಂತಿವರ್ಧಕವನ್ನು ಮಾರಾಟ ಮಾಡಿದ್ದಕ್ಕಾಗಿ ಜೆಎಂಎಫ್‌ಸಿ ನ್ಯಾಯಾಲವು ಕಲಬುರಗಿಯ ಉಮಾ ಮೆಡಿಕಲ್ಸ್ ಅಂಡ್ ಜನರಲ್ ಸ್ಟೋರ್ಸ್ ಮಾಲಕ ವಿಶ್ವನಾಥ್‌ಗೆ 20 ಸಾವಿರ ರೂ.ಗಳ ದಂಡ ಹಾಗೂ ನ್ಯಾಯಾಲಯದ ಅವಧಿ ಮುಗಿಯುವವರೆಗೂ ಜೈಲು ಶಿಕ್ಷೆಯನ್ನು ವಿಧಿಸಿದೆ.
ಅರ್ಹತಾ ವ್ಯಕ್ತಿಯ ಗೈರು ಹಾಜರಿಯಲ್ಲಿ ಔಷಧ ಮತ್ತು ಕಾಂತಿವರ್ಧಕಗಳನ್ನು ಮಾರಾಟ ಮಾಡಿದ್ದಕ್ಕಾಗಿ ಸಾಗರದ ರಾಘವೇಂದ್ರ ಮೆಡಿಕಲ್ ಅಂಡ್ ಜನರಲ್ ಸ್ಟೋರ್ಸ್‌ನ ಮಾಲಕರಾದ ರಾಘವೇಂದ್ರ ಸಿ.ಅವರಿಗೆ ಜೆಎಂಎಫ್‌ಸಿ ನ್ಯಾಯಾಲಯವು 5 ಸಾವಿರ ರೂ.ದಂಡ ಹಾಗೂ ನ್ಯಾಯಾಲಯದ ಅವಧಿ ಮುಗಿಯುವವರೆಗೂ ಜೈಲು ಶಿಕ್ಷೆಯನ್ನು ವಿಧಿಸಿದೆ.
ಅಧಿಕೃತ ಔಷಧ ಪರವಾನಗಿ ಹೊಂದದೆ ಸಂಸ್ಥೆಯಲ್ಲಿ ಔಷಧ ದಾಸ್ತಾನು ಮಾರಾಟ ಮಾಡಿದ್ದು, ಔಷಧ ಮತ್ತು ಕಾಂತಿವರ್ಧಕವನ್ನು ಮಾರಾಟ ಮಾಡಿದ್ದಕ್ಕಾಗಿ ಜೆಎಂಎಫ್‌ಸಿ ನ್ಯಾಯಾಲವು ನಿಪ್ಪಾಣಿಯ ಲಕ್ಷ್ಮೀ ಮೆಡಿಕಲ್ ಸ್ಟೋರ್ಸ್‌ನ ಮಾಲಕ ರಮೇಶ್ ಕಲಿಗೌಡ ಪಾಟೀಲ್‌ಗೆ 6 ಸಾವಿರ ರೂ.ದಂಡ ಹಾಗೂ ನ್ಯಾಯಾಲಯದ ಅವಧಿ ಮುಗಿಯುವವರೆಗೂ ಜೈಲು ಶಿಕ್ಷೆಯನ್ನು ವಿಧಿಸಿದೆ ಎಂದು ಪ್ರಕಟನೆ ತಿಳಿಸಿದೆ.