ಆಗಸ್ಟ್ 30ರ ವರೆಗೆ ಬಿಎಸ್‌ವೈ ಬಂಧಿಸದಂತೆ ಎಸಿಬಿಗೆ ಹೈಕೋರ್ಟ್ ಸೂಚನೆ

Update: 2017-08-28 14:44 GMT

ಬೆಂಗಳೂರು, ಆ.28: ಡಾ.ಕೆ.ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಯೋಜನೆಯಲ್ಲಿನ ಡಿ-ನೋಟಿಫಿಕೇಷನ್ ದೂರಿಗೆ ಸಂಬಂಧಿಸಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ಎರಡು ಎಫ್‌ಐಆರ್ ರದ್ದುಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಬುಧವಾರ(ಆ.30)ಕ್ಕೆ ಮುಂದೂಡಿದೆ. ಅಲ್ಲದೆ, ಬುಧವಾರದ ವರೆಗೆ ಬಿಎಸ್‌ವೈ ಅವರನ್ನು ಬಂಧಿಸದಂತೆ ಎಸಿಬಿಗೆ ಸೂಚಿಸಿದೆ.

ಈ ಸಂಬಂಧ ಎರಡು ಎಫ್‌ಐಆರ್ ರದ್ದುಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ್‌ಕುಮಾರ್ ಅವರಿದ್ದ ನ್ಯಾಯಪೀಠ ಮೇಲ್ಕಂಡ ಆದೇಶ ನೀಡಿತು.

 ರಾಜ್ಯ ಸರಕಾರದ ಪರ ವಾದಿಸಿದ ವಕೀಲರು, ಡಾ.ಕೆ.ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಯೋಜನೆಯಲ್ಲಿನ ಡಿ-ನೋಟಿಫಿಕೇಷನ್ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವುದಾಗಿ ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿ ಆಗಿದ್ದಾಗ ಅಧಿವೇಶನದಲ್ಲಿಯೇ ಆಶ್ವಾಸನೆ ನೀಡಿದ್ದರು. ಆದರೆ, ಯಡಿಯೂರಪ್ಪ ವಿರುದ್ಧ ಎಸಿಬಿ ಅಧಿಕಾರಿಗಳು ಎಫ್‌ಐಆರ್ ದಾಖಲಿಸಲು ಹಾಗೂ ವಿಚಾರಣೆಗೆ ಹಾಜರಾಗಲು ರಾಜ್ಯ ಸರಕಾರದ ಪಾತ್ರವೇನೂ ಇಲ್ಲ ಎಂದು ಪೀಠಕ್ಕೆ ತಿಳಿಸಿದರು.

ಅರ್ಜಿದಾರರ ಪರ ವಾದಿಸಿದ ವಕೀಲರು, ಬಿಎಸ್‌ವೈ ಅವರು ಡಾ.ಕೆ.ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಯೋಜನೆ ಸಂಬಂಧ ಸಂವಿಧಾನಾತ್ಮಕವಾಗಿ ನಡೆದುಕೊಂಡಿದ್ದಾರೆ. ಅಲ್ಲದೆ, ಬಿಎಸ್‌ವೈ ಅವರು ಜಮೀನಿನ ಮಾಲಕರು ಅಲ್ಲ ಹಾಗೂ ಭೂ ಸ್ವಾಧೀನ ಅಧಿಕಾರಿಯೂ ಅಲ್ಲ. ಹೀಗಾಗಿ, ಇವರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ರದ್ದುಗೊಳಿಸಬೇಕೆಂದು ಪೀಠಕ್ಕೆ ತಿಳಿಸಿದರು.

ವಕೀಲರ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠವು ಆ.30ರವರೆಗೆ ಬಿ.ಎಸ್.ಯಡಿಯೂರಪ್ಪ ಅವರನ್ನು ಬಂಧಿಸದಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಡಾ.ಕೆ.ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಗರದ ವಿವಿಧೆಡೆ ವಶಪಡಿಸಿಕೊಂಡಿದ್ದ ಒಟ್ಟು 3,546.12 ಎಕರೆ ಜಮೀನಿನಲ್ಲಿ 257 ಎಕರೆ 20 ಗುಂಟೆ ಜಮೀನನ್ನು ಅಕ್ರಮವಾಗಿ ಡಿನೋಟಿೈ ಮಾಡಿದ್ದಾರೆ ಎಂದು ಆರೋಪಿಸಿ ಡಾ.ಡಿ.ಅಯ್ಯಪ್ಪ ಎಸಿಬಿಗೆ ಖಾಸಗಿ ದೂರು ನೀಡಿದ್ದರು.

ಈ ದೂರು ಆಧರಿಸಿ ಎಸಿಬಿಯು ಯಡಿಯೂರಪ್ಪ ವಿರುದ್ಧ ಆ.10ರಂದು ಮೊದಲನೇ ಮತ್ತು ಆ.17ರಂದು ಎರಡನೇ ಎಫ್‌ಐಆರ್ ದಾಖಲಿಸಿತ್ತು. ಈ ಎರಡೂ ಎಫ್‌ಐಆರ್‌ಗಳ ರದ್ದತಿಗೆ ಕೋರಿ ಯಡಿಯೂರಪ್ಪ ಹೈಕೋರ್ಟ್‌ಗೆ ಪ್ರತ್ಯೇಕ ಎರಡು ಅರ್ಜಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News