ಆ.30ರಂದು ರಾಷ್ಟ್ರಮಟ್ಟದ ಸಮ್ಮೇಳನ: ಡಾ.ಜಿ.ರವೀಂದ್ರನಾಥ್
ಬೆಂಗಳೂರು, ಆ.29: ಎಪಿಎಸ್ ತಾಂತ್ರಿಕ ಕಾಲೇಜು ವತಿಯಿಂದ ಆ.30 ‘ರೀಸೆಂಟ್ ಅಡ್ವಾನ್ಸಸ್ ಇನ್ ಮೆಟೀರಿಯಲ್ಸ್’ ವಿಷಯ ಕುರಿತು ಒಂದು ದಿನದ ರಾಷ್ಟ್ರಮಟ್ಟದ ಸಮ್ಮೇಳನವನ್ನು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಜಿ.ರವೀಂದ್ರನಾಥ್ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನವನ್ನು ತ್ರಿಪುರ ರಾಜ್ಯದ ರಾಜ್ಯಪಾಲ ತಥಾಗತ್ ರಾಯ್ ಉದ್ಘಾಟಿಸಲಿದ್ದು, ಎಪಿಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಟಿ.ವಿ.ಮಾರುತಿ, ಉಪಾಧ್ಯಕ್ಷ ಎ.ಪಿ.ಆಚಾರ್ಯ, ಪ್ರಧಾನ ಕಾರ್ಯದರ್ಶಿ ಕೆ.ಪಿ.ನರಸಿಂಹಮೂರ್ತಿ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸಮ್ಮೇಳನದಲ್ಲಿ ನ್ಯಾನೋ ವಸ್ತುಗಳ ಗುಣಸಾಂದ್ರತೆ, ಬಹುಮುಖಿ ಕಾರ್ಯ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುವುದು. ಇದರಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು, ಸಂಶೋಧಕರು, ಉದ್ದಿಮೆದಾರರು ಭಾಗವಹಿಸಲಿದ್ದಾರೆ. ಇದೇ ವೇಳೆ ಅವರು ನ್ಯಾನೋ ವಸ್ತುಗಳ ಬಳಕೆ ಸೇರಿದಂತೆ ಆ ಕುರಿತು ಪ್ರಬಂಧ ಮಂಡಿಸಲಿದ್ದಾರೆ. ನಂತರ ಅವುಗಳನ್ನು ಆಯ್ಕೆ ಮಾಡಿ ಪ್ರಕಟಿಸಲಾಗುವುದು ಎಂದರು.
ಇಂದಿನ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ನ್ಯಾನೋ ವಸ್ತುಗಳ ಬಳಕೆ ಹೆಚ್ಚಿದೆ. ಕೃಷಿಯಿಂದ ಕ್ಷಿಪಣಿವರೆಗೆ ಇದು ವ್ಯಾಪಿಸಿದೆ. ನ್ಯಾನೋ ವಸ್ತುಗಳ ಬಳಕೆ ಅಗಣಿತವಾಗುತ್ತಿದೆ. ಉಕ್ಕು, ಅಲ್ಯುಮಿನಿಯಂ ಹಾಗೂ ಇತರೆ ದುಬಾರಿ ಲೋಹ ವಸ್ತುಗಳ ಸ್ಥಾನವನ್ನು ನ್ಯಾನೋ ವಸ್ತುಗಳು ಆಕ್ರಮಿಸಿವೆ. ಈ ನಿಟ್ಟಿನಲ್ಲಿ ಕಾಲೇಜಿನಲ್ಲಿ ಒಂದು ನ್ಯಾನೋ ಕೇಂದ್ರ ಸ್ಥಾಪಿಸಲಿದ್ದು, ಇದೇ ವೇಳೆ ನ್ಯಾನೋ ಕೇಂದ್ರಕ್ಕೆ ಚಾಲನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಭವಿಷ್ಯದಲ್ಲಿ ಸಂಶೋಧನೆ, ಅಭಿವೃದ್ಧಿ, ಹೊಸ ಆವಿಷ್ಕಾರಗಳನ್ನು ಗುರುತಿಸುವುದು ಹಾಗೂ ಅಭಿವೃದ್ಧಿ ಕೇಂದ್ರೀಕೃತವಾಗಿ ಕೆಲಸ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡಲಾಗುವುದು. ಮೆಟೀರಿಯಲ್ಸ್ ಮತ್ತು ಎಂಜಿನಿಯರಿಂಗ್ ಕುರಿತಾಗಿ ಇರುವ ಜ್ಞಾನ ಮತ್ತು ನೈಪುಣ್ಯತೆಯನ್ನು ಹೆಚ್ಚಿಸುವುದು, ಈ ಮೂಲಕ ಸಂಶೋಧನಾ ಉತ್ಕೃಷ್ಟ ಸಾಧನಗಳ ಸದ್ಭಳಕೆ ಕುರಿತು ತಿಳಿಸಿಕೊಡುವುದು ಇದರ ಮೂಲ ಉದ್ದೇಶವಾಗಿದೆ ಎಂದು ವಿವರಿಸಿದರು.