ಲಿಂಗಾಯತ-ವೀರಶೈವ ಒಂದೇ: ಸಚಿವ ಈಶ್ವರ ಖಂಡ್ರೆ
ಬೆಂಗಳೂರು, ಆ.29: ಲಿಂಗಾಯತ ಮತ್ತ ವೀರಶೈವ ಎರಡೂ ಒಂದೇ. ಉಭಯ ಸಮುದಾಯವೂ ಲಿಂಗ ಪೂಜೆ ಮಾಡುತ್ತದೆ, ಹೀಗಾಗಿ ಎರಡೂ ಸಮುದಾಯವೂ ತಮ್ಮ ಮಧ್ಯೆದ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನಿಂದ ಮುಂದೆ ಸಾಗಬೇಕು ಎಂದು ಪೌರಾಡಳಿತ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರತ್ಯೇಕ ಧರ್ಮ ವಿಚಾರಕ್ಕೆ ಸಂಬಂಧಿಸಿದಂತೆ ಉಭಯ ಸಮುದಾಯದ ಮಧ್ಯೆದ ಸಮಸ್ಯೆ ಬಗೆಹರಿಸಲು ತಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸ್ಪಷ್ಟನೆ ನೀಡಿದರು.
ಲಿಂಗಾಯತ ಮತ್ತು ವೀರಶೈವ ಒಂದೇ ಎಂಬುದು ವೀರಶೈವ ಮಹಾಸಭಾ ಅಭಿಪ್ರಾಯ. ಹೀಗಾಗಿ ವೀರಶೈವ ಮಹಾ ಸಭಾವನ್ನು ಸ್ಥಾಪಿಸಿದ ಕುಮರೇಶ್ವರ್ ಅವರ ಅಭಿಪ್ರಾಯವೂ ಇದೇ ಆಗಿದೆ. ಇತ್ತೀಚೆಗೆ ಇವೆರಡರ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗಿದ್ದು, ವೀರಶೈವ ಮತ್ತು ಲಿಂಗಾಯತರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವೆ ಎಂದರು.
ವೀರಶೈವ ಮತ್ತು ಲಿಂಗಾಯತರ ಮಧ್ಯೆದ ಭಿನ್ನಾಭಿಪ್ರಾಯ ಶಮನಗೊಳ್ಳುತ್ತದೆ ಎಂಬ ಆಶಾಭಾವ ನನ್ನದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಎರಡೂ ಸಮುದಾಯವನ್ನು ಒಟ್ಟಾಗಿ ಬನ್ನಿ ಎಂದು ಸಲಹೆ ನೀಡಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಭಿನ್ನಾಭಿಪ್ರಾಯ ಬಗೆಹರಿಸುವೆ ಎಂದರು.