×
Ad

ಆರೋಗ್ಯ, ಅಪೌಷ್ಟಿಕತೆ ಸಮಸ್ಯೆ ನಿವಾರಣೆಗೆ ಆದ್ಯತೆ: ಅಮಿತಾಬ್ ಕಾಂತ್

Update: 2017-08-29 18:56 IST

ಬೆಂಗಳೂರು, ಆ. 29: ಆರೋಗ್ಯ, ಶಿಕ್ಷಣ, ಅಪೌಷ್ಟಿಕತೆ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ನೀತಿ ಆಯೋಗ ವಿಶೇಷ ಗಮನಹರಿಸಿದ್ದು, ಕರ್ನಾಟಕವನ್ನು ಸುಧಾರಿತ ಆರೋಗ್ಯ ವ್ಯವಸ್ಥೆಯಲ್ಲಿ ವಿಶ್ವಕ್ಕೆ ಮಾದರಿ ಮಾಡುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಬ್ ಕಾಂತ್ ತಿಳಿಸಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿ ಮಾನವ ಸಂಪನ್ಮೂಲ ಸುಸ್ಥಿರ ಪರಿವರ್ತನಾ ಸಂಸ್ಥೆ ಹಮ್ಮಿಕೊಂಡಿದ್ದ ಆರೋಗ್ಯ ವ್ಯವಸ್ಥೆಯ ಸುಧಾರಣಾ ಕಾರ್ಯಾಗಾರವನ್ನುದ್ದೇಶಿಸಿ ಹೊಸದಿಲ್ಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಶಿಕ್ಷಣ, ಆರೋಗ್ಯ, ಅಪೌಷ್ಟಿಕತೆ ಕುರಿತು ನೀತಿ ಆಯೋಗ ಕರ್ನಾಟಕ, ಉತ್ತರ ಪ್ರದೇಶ ಹಾಗೂ ಅಸ್ಸಾಂ ರಾಜ್ಯಗಳನ್ನು ಆಯ್ಕೆ ಮಾಡಿಕೊಂಡಿದೆ ಎಂದರು.

ವಿಶೇಷವಾಗಿ ಕರ್ನಾಟಕ ಆರೋಗ್ಯ ಸುಧಾರಣೆಯಲ್ಲಿ ಪ್ರಗತಿಪರ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಿಗೆ ಪ್ರೋತ್ಸಾಹ ನೀಡಿ ಇನ್ನಷ್ಟು ಸುಧಾರಣೆ ಮಾಡಲು ನೀತಿ ಆಯೋಗ ಬಯಸುತ್ತದೆ. ಹೀಗಾಗಿ ಆರೋಗ್ಯ ಸುಧಾರಣೆಯಲ್ಲಿ ಮುಂಚೂಣಿ ನಾಯಕತ್ವ ವಹಿಸುವ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗುರುತಿಸಲಾಗುವುದು. ಈ ಮೂಲಕ ಜಿಲ್ಲೆ ಜಿಲ್ಲೆಗಳ ನಡುವೆ ಆರೋಗ್ಯಕರ ಪೈಪೋಟಿ ಏರ್ಪಡಿಸಲಾಗುವುದು ಎಂದು ಹೇಳಿದರು.

ಕಾರ್ಯಾಗಾರ ಉದ್ಘಾಟಿಸಿದ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ಮಾತನಾಡಿ, ದಕ್ಷಿಣ ಭಾರತದಲ್ಲೇ ಕರ್ನಾಟಕ ಅತಿಹೆಚ್ಚು ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ನರ್ಸಿಂಗ್ ಕಾಲೇಜುಗಳನ್ನು ಹೊಂದಿದೆ. ಆದರೆ, ಇವುಗಳಿಂದ ಶಿಕ್ಷಣ ಪಡೆದು ಹೊರಬರುವ ಮಾನವ ಸಂಪನ್ಮೂಲವನ್ನು ಸರಿಯಾಗಿ ಬಳಸಿಕೊಳ್ಳಲು ಆಗುತ್ತಿಲ್ಲ. ಈ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದರು.

ರಾಜ್ಯದಲ್ಲಿ ಆರೋಗ್ಯ ಸುಧಾರಣೆ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ, ಆರೋಗ್ಯ ಇಲಾಖೆಯನ್ನು ಮಾತ್ರ ಅವಲಂಬಿಸಿಲ್ಲ. ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನೂ ಒಳಗೊಂಡಿದೆ. ಎಲ್ಲರೂ ಒಟ್ಟಾಗಿ ಸೇರಿ ಸುಧಾರಣೆಗೆ ಕೈ ಜೋಡಿಸಬೇಕು ಎಂದು ಅವರು ಸಲಹೆ ನೀಡಿದರು.

ರಾಜ್ಯದಲ್ಲಿನ ಅಪ್ಟೌಕತೆ ನಿವಾರಣೆಗೆ ಹೆಚ್ಚು ಗಮನ ಹರಿಸಬೇಕಿದೆ. 2007ರಿಂದ 2016ರ ನಡುವೆ ತೆಗೆದುಕೊಂಡ ಸುಧಾರಣಾ ಕ್ರಮದಿಂದಾಗಿ ಶಿಶುಮರಣ ಪ್ರಮಾಣ 1 ಸಾವಿರಕ್ಕೆ 47 ರಿಂದ 28ಕ್ಕೆ ಇಳಿದಿದೆ. 2007 ರಿಂದ 2015ರ ನಡುವೆ ತಾಯಂದಿರ ಮರಣದ ಪ್ರಮಾಣ 1ಲಕ್ಷ ಪ್ರಕರಣಗಳಲ್ಲಿ 178 ರಿಂದ 133ಕ್ಕೆ ಕುಸಿದಿದೆ ಎಂದ ಅವರು, ಆಸ್ಪತ್ರೆಯಲ್ಲಿ ಹೆರಿಗೆಯ ಪ್ರಮಾಣ ಶೇ.99ಕ್ಕೆ ಏರಿಕೆಯಾಗಿದೆ. ಸಾಕಷ್ಟು ಸುಧಾರಣೆಗಳಾಗಿವೆ. ಇನ್ನು ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಮತ್ತಷ್ಟು ಅಭಿವೃದ್ಧಿ ಮಾಡಲು ಸಾಧ್ಯ ಎಂದು ಸುಭಾಷ್ ಚಂದ್ರ ಕುಂಟಿಯಾ ಇದೇ ವೇಳೆ ಹೇಳಿದರು.

ಖ್ಯಾತ ವೈದ್ಯ ಡಾ.ದೇವಿಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ವರ್ಷಕ್ಕೆ ಹನ್ನೆರಡೂವರೆ ಸಾವಿರ ಶಸ್ತ್ರ ಚಿಕಿತ್ಸೆಗಳಾಗುತ್ತಿವೆ. ಇದಕ್ಕೆ 23 ರಿಂದ 30 ಸಾವಿರ ಕೋಟಿ ರೂ.ವೆಚ್ಚವಾಗುತ್ತಿದೆ. ಇಷ್ಟು ಹಣ ಭರಿಸುವುದು ಕಷ್ಟಸಾಧ್ಯ. ಖಾಸಗಿ ಸಂಸ್ಥೆಗಳು ನೀಡುತ್ತಿರುವ ವಿಮಾ ಸೌಲಭ್ಯವನ್ನು ಶೇ.90ರಷ್ಟು ಖಾಸಗಿ ವೈದ್ಯಕೀಯ ಸಂಸ್ಥೆಗಳು ಬಳಸಿಕೊಳ್ಳುತ್ತಿವೆ. ಸರಕಾರವೂ ಸುಧಾರಿತ ವಿಮಾ ಸೌಲಭ್ಯ ತರಲು ಮುಂದಾಗಿದೆ. ಆನಂತರ ವೈದ್ಯಕೀಯ ಸೇವೆಯ ಗುಣಮಟ್ಟ ಹೆಚ್ಚಿಸುವತ್ತ ಗಮನ ಹರಿಸಬೇಕಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News