ತುಂಗಭದ್ರಾ ಜಲಾಶಯದಿಂದ ಕೃಷಿ ಬೆಳೆಗಳಿಗೆ ನೀರು ಹರಿಸಲು ತೀರ್ಮಾನ: ಸಚಿವ ಸಂತೋಷ್ ಲಾಡ್
ಬೆಂಗಳೂರು, ಆ. 29: ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಸುಮಾರು 6.50ಲಕ್ಷ ಎಕರೆ ಪ್ರದೇಶಗಳಲ್ಲಿ ರೈತರು ಕೃಷಿ ಆಧಾರಿತ ಬೆಳೆಗಳನ್ನು ಬೆಳೆದಿದ್ದು, ಮುಂಗಾರು ಹಂಗಾಮಿನ ಮಳೆ ಕ್ಷೀಣಿಸಿರುವುದರಿಂದ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯಿಂದ ನೀರು ಬಿಡಲು ತೀರ್ಮಾನಿಸಲಾಯಿತು ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್.ಲಾಡ್ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ತನ್ನ ಅಧ್ಯಕ್ಷತೆಯಲ್ಲಿ ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಬಳಿಕ ಮಾತನಾಡಿದ ಅವರು, ರೈತರು ಬೆಳೆದಿರುವ ಬೆಳೆಗಳಿಗೆ ತೊಂದರೆಯಾಗದಂತೆ 60ದಿನಗಳ ಕಾಲ 2800 ಕ್ಯೂಸೆಕ್ಸ್ ನೀರನ್ನು ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯಿಂದ ನೀರು ಹರಿಸಲಾಗುವುದು ಎಂದು ಹೇಳಿದರು.
ಆನಂತರದ ದಿನಗಳಲ್ಲಿ ನೀರಿನ ಲಭ್ಯತೆ ಆಧರಿಸಿ 30 ದಿನಗಳ ಕಾಲ 3800 ಕ್ಯೂಸೆಕ್ಸ್ ನೀರನ್ನು ಬಿಡಲಾಗುವುದು ಎಂದ ಅವರು, ತುಂಗಭದ್ರಾ ಜಲಾಶಯದಲ್ಲಿ ಸುಮಾರು 75 ಟಿಎಂಸಿ ನೀರು ಸಂಗ್ರಹರುವ ಸಾಧ್ಯತೆ ಇದ್ದು, ಅದರಲ್ಲಿ ಆ ಭಾಗಕ್ಕೆ ಕುಡಿಯುವ ನೀರಿಗಾಗಿ 12 ಟಿಎಂಸಿ ನೀರು ಬೇಕಾಗುತ್ತದೆ. ಹಾಲಿ ಬೆಳೆದಿರುವ ಬೆಳೆಗಳಿಗೆ ಸುಮಾರು 33 ಟಿಎಂಸಿ ನೀರು ಬೇಕು. ಜಲಾಶಯದಲ್ಲಿ ಹಾಲಿ ಸಂಗ್ರಹವಿರುವ ನೀರಿನ ಲಭ್ಯತೆ ಆಧರಿಸಿ ಕುಡಿಯುವ ನೀರನ್ನು ಸಂಗ್ರಹಿಸಿ ಉಳಿಕೆ ನೀರಿನಲ್ಲಿ ಕೃಷಿ ಚಟುವಟಿಕೆಗಳಿಗೆ ನೀರು ಬಿಡಲಾಗುವುದು. ರೈತರು ಹೆಚ್ಚುವರಿ ಭತ್ತ ಬಿತ್ತನೆ ಮಾಡುವುದನ್ನು ನಿಲ್ಲಿಸಿ ಮಳೆ ಆಧಾರಿತ ಬೆಳೆಗಳನ್ನು ಬೆಳೆಯುವಂತೆ ಆ ಭಾಗದ ರೈತರಲ್ಲಿ ಮನವಿ ಮಾಡಿದರು.
ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಾಗುತ್ತಿರುವ ಹಿನ್ನೆಲೆಯಲ್ಲಿ 2018ರ ವರೆಗೆ ಆ ಭಾಗದ ಜನರಿಗೆ ಕುಡಿಯುವ ನೀರು ಸರಬರಾಜಿಗೆ ಎಲ್ಲ ಮುಂಜಾಗ್ರತಾ ಕ್ರಮ ಜರಗಿಸಿ ನೀರನ್ನು ಕಾಯ್ದಿರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಜಲಾಶಯದಲ್ಲಿನ ನೀರಿನ ಲಭ್ಯತೆ ಆಧಾರದ ಮೇಲೆ ಕೃಷಿ ಚಟುವಟಿಕೆಗಳಿಗೆ ನೀರು ಬಿಡಲಾಗುವುದು ಎಂದರು.
ಸಭೆಯಲ್ಲಿ ರಾಯಚೂರು ಉಸ್ತುವಾರಿ ಸಚಿವ ತನ್ವೀರ್ ಸೇಠ್, ಕೊಪ್ಪಳ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ, ಶಾಸಕರಾದ ಇಕ್ಬಾಲ್ ಅನ್ಸಾರಿ, ಭೀಮಾನಾಯ್ಕಾ, ಶಿವರಾಜ ತಂಗಡಗಿ, ಆನಂದ್‌ಸಿಂಗ್, ರಾಘವೇಂದ್ರ ಹಿಟ್ನಾಳ್, ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಸಂಸದ ಕರಡಿ ಸಂಗಣ್ಣ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.