ಗೋಹತ್ಯೆಗಿಂತ ಮೊದಲು ರೈತರ ಹತ್ಯೆ ನಿಲ್ಲಿಸಿ: ಕೆ.ಎಸ್.ಪುಟ್ಟಣ್ಣಯ್ಯ

Update: 2017-08-29 14:33 GMT

ಬೆಂಗಳೂರು, ಆ.29: ಕೇಂದ್ರ ಸರಕಾರ ಗೋಹತ್ಯೆ ನಿಲ್ಲಿಸಲು ಹರಸಾಹಸ ಪಡುತ್ತಿದೆ. ಆದರೆ, ಮೊದಲು ದೇಶದಲ್ಲಿ ನಡೆಯುತ್ತಿರುವ ರೈತರ ಹತ್ಯೆಗಳನ್ನು ನಿಲ್ಲಿಸಲಿ ಎಂದು ಸ್ವರಾಜ್ ಇಂಡಿಯಾ ಕರ್ನಾಟಕ ಪಕ್ಷದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಒತ್ತಾಯಿಸಿದ್ದಾರೆ.

ಮಂಗಳವಾರ ನಗರದ ಗಾಂಧಿಭವನದಲ್ಲಿ ಸ್ವರಾಜ್ ಇಂಡಿಯಾ ಕರ್ನಾಟಕ ಹಮ್ಮಿಕೊಂಡಿದ್ದ ನಮ್ಮ ಪ್ರಜಾತಂತ್ರ ಎದುರಿಸುತ್ತಿರುವ ಸವಾಲುಗಳು ಕುರಿತ ಸಂವಾದವನ್ನುದ್ದೇಶಿಸಿ ಮಾತನಾಡಿದ ಅವರು, ಗೋಹತ್ಯೆ ನಡೆದರೆ ಬೀದಿಗೆ ಬಂದು ಕೂಗುತ್ತಾರೆ. ಆದರೆ, ರೈತನ ಹತ್ಯೆ ನಡೆದರೆ ಈ ಧ್ವನಿ ಎಲ್ಲಿ ಹೋಗುತ್ತದೆ. ಇಡೀ ವ್ಯವಸ್ಥೆ ಸೇರಿಕೊಂಡು ರೈತರನ್ನು ಕೊಲೆ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಡಿನಿಂದ ಒಂದು ಚಿರತೆ ಬೆಂಗಳೂರಿಗೆ ಬಂದರೆ, ಅದನ್ನು ಮತ್ತೆ ಕಾಡಿಗೆ ಜೋಪಾನವಾಗಿ ಬಿಟ್ಟು ಬರಲಾಗುತ್ತದೆ. ಅದೇ ನೂರಾರು ರೈತರು ಹಳ್ಳಿ ಬಿಟ್ಟು ಬೆಂಗಳೂರಿಗೆ ಬಂದರೆ, ಅವರನ್ನು ಪುನಃ ಏಕೆ ಹಳ್ಳಿಗೆ ಬಿಡುತ್ತಿಲ್ಲ ಎಂದ ಅವರು, ಇಂದಿಗೂ ನೂರಾರು ರೈತರು ನಗರ ಭಾಗದಲ್ಲಿ ಭಿಕ್ಷೆ ಬೇಡುತ್ತಿರುವುದನ್ನು ಕಾಣಬಹುದಾಗಿದೆ. ಇದಕ್ಕೆಲ್ಲಾ ಯಾರು ಶಾಶ್ವತ ಪರಿಹಾರ ನೀಡುವವರು ಎಂದು ಪ್ರಶ್ನಿಸಿದರು.

ಸಮಾಜ ಒಡೆದು ರಾಜಕೀಯ ನಡೆಸುವುದು ಹೆಚ್ಚಾಗುತ್ತಿದೆ. ನಮ್ಮ ದೇಶದಲ್ಲಿ ಜಾತಿಗೊಂದು ಸ್ಮಶಾನ ಇದೆ. ಪ್ರಾಣ ಹೋದರು, ಜಾತಿ ಬಿಟ್ಟು ಹೋಗುತ್ತಿಲ್ಲ ಎಂದ ಅವರು, ಶೇ. 90ರಷ್ಟು ಅಂಗವಿಕಲ ಮಕ್ಕಳ ಜನನಕ್ಕೆ ಜಾತಿಯಲ್ಲಿಯೇ ವಿವಾಹವಾಗುವುದು ಮುಖ್ಯ ಕಾರಣವಾಗಿದೆ ಎಂದು ವೈಜ್ಞಾನಿಕ ವರದಿ ಹೇಳಿದ್ದರೂ ಜಾತಿ ಬಿಡುತ್ತಿಲ್ಲ. ಹೀಗೇ ಮುಂದುವರೆದರೆ, ಕೈ-ಕಾಲು ಇರುವವರನ್ನು ಹುಡುಕಿಕೊಳ್ಳಬೇಕಾಗಬಹುದು ಎಂದು ವ್ಯಂಗ್ಯವಾಡಿದರು.

ಬರಗಾಲಕ್ಕೆ ಎಲ್ಲರೂ ಕಾರಣ, ಇದು ಕೇವಲ ರೈತರ ಸಮಸ್ಯೆ ಅಲ್ಲ. ದೇಶದ 130 ಕೋಟಿ ಜನರ ಸಮಸ್ಯೆ ಆಗಿದೆ. ಆದರೆ, ಇದರ ಬಗ್ಗೆ ಯಾವುದೇ ನೀತಿ ರಚನೆ ಮಾಡಿಲ್ಲ. ಆಹಾರ ಭದ್ರತೆ ಬೇಕು ಎನ್ನುವವರು ಬರಗಾಲದ ಬಗ್ಗೆಯೂ ಯೋಚಿಸುವ ಅಗತ್ಯ ಇದೆ. ಮುಂದೆ ಈ ಬಗ್ಗೆ ಹೋರಾಟ ನಡೆಸಲಾಗುವುದೆಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News