ಸೆಪ್ಟೆಂಬರ್ ಅಂತ್ಯಕ್ಕೆ 16 ಲಕ್ಷ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್: ಸಚಿವ ಯು.ಟಿ.ಖಾದರ್
ಬೆಂಗಳೂರು, ಆ.29: ಮುಂದಿನ ಸೆಪ್ಟಂಬರ್ ತಿಂಗಳ ಅಂತ್ಯಕ್ಕೆ 16.35 ಲಕ್ಷ ಬಿಪಿಎಲ್ ಕುಟುಂಬಗಳಿಗೆ ಪಡಿತರ ಕಾರ್ಡುಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸಿದ 1 ಲಕ್ಷ ಪಡಿತರ ಚೀಟಿಗಳನ್ನು ಈಗಾಗಲೇ ವಿತರಿಸಲಾಗಿದೆ. ಬಿಪಿಎಲ್ ಕಾರ್ಡುಗಳಿಗಾಗಿ 16.35 ಲಕ್ಷ ಅರ್ಜಿಗಳು ಬಂದಿವೆ. 11.84 ಲಕ್ಷ ಅರ್ಜಿಗಳ ಪರಿಶೀಲನೆ ಆಗಿದೆ. 6.50 ಲಕ್ಷ ಅರ್ಜಿಗಳ ಡಾಟಾ ಎಂಟ್ರಿ ಮಾಡಲಾಗಿದೆ ಎಂದರು.
ಮಾನವ ಸಂಪನ್ಮೂಲದ ಕೊರತೆಯಿಂದ ಪಡಿತರ ಚೀಟಿ ವಿತರಣೆಯಲ್ಲಿ ಸ್ವಲ್ಪ ವಿಳಂಬವಾಗಿದೆ. ಜನಸ್ನೇಹಿ ಕೇಂದ್ರಗಳಲ್ಲಿ ಹೆಚ್ಚುವರಿ ಡೇಟಾ ಆಪರೇಟರ್ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸೆಪ್ಟಂಬರ್ ಅಂತ್ಯಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಎಲ್ಲ ಫಲಾನುಭವಿಗಳಿಗೆ ಪಡಿತರ ಚೀಟಿಯನ್ನು ತಲುಪಿಸಲಾಗುವುದು ಎಂದು ಹೇಳಿದರು.
ಪಡಿತರ ಚೀಟಿಗಳನ್ನು ಪರಿಣಾಮಕಾರಿಯಾಗಿ ವಿತರಿಸುವ ಸಂಬಂಧ ಆನ್‌ಲೈನ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ತುರ್ತು ಸಂದರ್ಭಗಳಲ್ಲಿ ಪಡಿತರ ಚೀಟಿ ಅಗತ್ಯವಿದ್ದಲ್ಲಿ, ಅಂತಹ ಫಲಾನುಭವಿಗಳು ಗ್ರಾಮ ಪಂಚಾಯತ್ ಕಚೇರಿಗೆ ತೆರಳಿ ಅಗತ್ಯ ದಾಖಲಾತಿ ನೀಡಿದ್ದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರು ಪರಿಶೀಲನೆ ನಡೆಸಿ ಪಡಿತರ ಚೀಟಿ ನೀಡುವಂತೆ ಈಗಾಗಲೇ ಆದೇಶ ನೀಡಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 20,412 ನ್ಯಾಯ ಬೆಲೆ ಅಂಗಡಿಗಳಿದ್ದು, ಎಲ್ಲ ನ್ಯಾಯ ಬೆಲೆ ಅಂಗಡಿಗಳು ಪಾಯಿಂಟ್ ಆಫ್ ಸ್ಕೇಲ್(ಪಿಒಎಸ್) ಯಂತ್ರವನ್ನು ಅಳವಡಿಸಿಕೊಳ್ಳುವಂತೆ ನ್ಯಾಯ ಬೆಲೆ ಅಂಗಡಿಗಳಿಗೆ ಸೂಚಿಸಲಾಗಿದೆ. ಈಗಾಗಲೇ 10 ಸಾವಿರ ನ್ಯಾಯಬೆಲೆ ಅಂಗಡಿಗಳು ಈ ಯಂತ್ರವನ್ನು ಅಳವಡಿಸಿಕೊಂಡಿವೆ ಎಂದ ಅವರು, ಪಿಒಎಸ್ ಯಂತ್ರ ಅಳವಡಿಸಿಕೊಂಡಿರುವ ನ್ಯಾಯಬೆಲೆ ಅಂಗಡಿಗಳ ಮಾಲಕರಿಗೆ ಪ್ರತೀ ಕ್ವಿಂಟಾಲ್ ಪಡಿತರ ವಿತರಣೆಗೆ 87 ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಗ್ರಾಹಕರಿಗೆ ಆಗುತ್ತಿರುವ ವಂಚನೆಯನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಆಹಾರಧಾನ್ಯ ಸರಬರಾಜು ಮಾಡುವ ಲಾರಿಗಳಿಗೆ ಜಿಪಿಎಸ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ ಎಂದು ವಿವರಿಸಿದರು.
ಇಂಟರ್‌ನೆಟ್ ಸಂಪರ್ಕ ಪಡೆದುಕೊಳ್ಳಲು ಸಾಧ್ಯವಿದ್ದರೂ ಪಿಒಎಸ್ ಯಂತ್ರ ಅಳವಡಿಸಿಕೊಳ್ಳದೆ ಇದ್ದರೆ, ಅಂತಹ ನ್ಯಾಯ ಬೆಲೆ ಅಂಗಡಿಗಳ ವ್ಯಾಪ್ತಿಯಲ್ಲಿ ಮತ್ತೆ ಟೋಕನ್ ವ್ಯವಸ್ಥೆ ಜಾರಿಗೆ ತರಲಾಗುವುದು. ಮುಂಬರುವ ದಿನಗಳಲ್ಲಿ ಆಹಾರ ಧಾನ್ಯಗಳನ್ನು ಬ್ಯಾಗ್‌ನಲ್ಲಿ ಪ್ಯಾಕ್ ಮಾಡಿ ಕೊಡಲು ಚಿಂತನೆ ನಡೆಸಲಾಗಿದೆ. ಇದಕ್ಕೆ ಪ್ರತಿ ತಿಂಗಳು 10 ಕೋಟಿ ರೂ.ಗಳಂತೆ ವಾರ್ಷಿಕ 120 ಕೋಟಿ ರೂ. ಹೆಚ್ಚುವರಿ ಹೊರೆಯಾಗಲಿದೆ. 800 ಕಾರ್ಡುಗಳನ್ನು ಹೊಂದಿರುವ ನ್ಯಾಯಬೆಲೆ ಅಂಗಡಿಗಳಿಗೆ ಕ್ವಿಂಟಲ್‌ಗೆ 25 ರೂ.ಕಮಿಷನ್ ನೀಡಲು ನಿರ್ಧರಿಸಲಾಗಿದೆ. 800 ಕಾರ್ಡುಗಳನ್ನು ಹೊಂದಿರುವ ನ್ಯಾಯಬೆಲೆ ಅಂಗಡಿಯ ಮಾಲಕರಿಗೆ ಮಾಸಿಕ ಕನಿಷ್ಠ 25-30 ಸಾವಿರ ರೂ.ಆದಾಯ ಬರುತ್ತದೆ ಎಂದು ಮಾಹಿತಿ ನೀಡಿದರು.
ರಾಜಕೀಯ ಲಾಭ ಪಡೆಯಲು ಸಾಧ್ಯವಿಲ್ಲ
ಬಿಜೆಪಿ ಯುವ ಮೋರ್ಚಾದವರು ಮಂಗಳೂರುವರೆಗೆ ಬೈಕಿನಲ್ಲಾದರೂ ಬರಲಿ, ತಲೆ ಕೆಳಗೆ ಮಾಡಿ ಕೈಯಲ್ಲೇ ಬರಲಿ, ರಾಜಕೀಯವಾಗಿ ಅವರಿಗೆ ಏನೂ ಪ್ರಯೋಜನವಾಗುವುದಿಲ್ಲ. ಮಂಗಳೂರು ಗಲಭೆ ಕುರಿತು ಸಚಿವ ರಮಾನಾಥ್ ರೈ ನೀಡಿದ ಹೇಳಿಕೆಯಲ್ಲಿ ತಪ್ಪೇನಿದೆ. ಪೊಲೀಸ್ ಇಲಾಖೆಯ ತನಿಖಾ ವರದಿಯಲ್ಲಿನ ಅಂಶಗಳನ್ನು ಅವರು ಉಲ್ಲೇಖಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ವಾಸ್ತವ ಪರಿಸ್ಥಿತಿಯ ಅರಿವಿಲ್ಲದೆ ನೀಡಿರುವ ಹೇಳಿಕೆಯಿಂದ ಬೇಸರವಾಗಿದೆ.
-ಯು.ಟಿ.ಖಾದರ್, ಆಹಾರ ಸಚಿವ