×
Ad

ಬಿಬಿಎಂಪಿ, ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ

Update: 2017-08-29 21:22 IST

ಬೆಂಗಳೂರು, ಆ.29: ರಾಜಾಜಿನಗರದಲ್ಲಿ ಬಿಡಿಎಗೆ ಸೇರಿದ 6 ಎಕರೆ 1 ಗುಂಟೆ ಜಾಗವನ್ನು ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಮಂಜೂರು ಮಾಡಿದ ಸಂಬಂಧ ಬಿಬಿಎಂಪಿ, ಕೆಪಿಟಿಸಿಎಲ್ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಈ ಸಂಬಂಧ ಗೀತಾ ಮಿಶ್ರಾ ಸೇರಿ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿತು.

ಅರ್ಜಿದಾರರ ಪರ ವಾದಿಸಿದ ವಕೀಲ ಜಿ.ಆರ್.ಮೋಹನ್ ಅವರು, ರಾಜಾಜಿನಗರದ 3ನೆ ಹಂತದಲ್ಲಿ 17 ಎಕರೆ ಜಾಗದಲ್ಲಿ ಕೆಪಿಟಿಸಿಎಲ್ ಕಚೇರಿ ಇದೆ. ಆದರೆ, ಇದೇ ಜಾಗದಲ್ಲಿ ಬಿಡಿಎ ಅವರ ಅನುಮತಿಯನ್ನು ಪಡೆಯದೆ ಬಿಬಿಎಂಪಿಗೆ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲು 6 ಎಕರೆ 1 ಗುಂಟೆ ಜಾಗವನ್ನು ಕೆಪಿಟಿಸಿಎಲ್‌ನವರು ನೀಡಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ಕೆಪಿಟಿಸಿಎಲ್‌ನವರು 6 ಎಕರೆ 1 ಗುಂಟೆ ಜಾಗವನ್ನು ಬಿಬಿಎಂಪಿಗೆ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕಾಗಿ ಮಂಜೂರು ಮಾಡುವಾಗ ಬಿಡಿಎ ಅವರ ಅನುಮತಿಯನ್ನು ಪಡೆಯಬೇಕಾಗಿತ್ತು. ಆದರೆ, ಯಾವುದೇ ಕಾನೂನನ್ನು ಪಾಲಿಸದೆ ಕೆಪಿಟಿಸಿಎಲ್‌ನವರು ಬಿಬಿಎಂಪಿಗೆ ಜಾಗವನ್ನು ಮಂಜೂರು ವಾಡಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠವು ಬಿಡಿಎ, ಕೆಪಿಟಿಸಿಎಲ್, ಬಿಬಿಎಂಪಿ, ಸರಕಾರದ ಮುಖ್ಯಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News