ಮಾಸ್ತಿಗುಡಿ ದುರಂತ: ಕೆಳ ನ್ಯಾಯಾಲಯದ ವಿಚಾರಣೆ ತಡೆಗೆ ನಿರಾಕರಿಸಿದ ಹೈಕೋರ್ಟ್
ಬೆಂಗಳೂರು, ಆ.29: ಮಾಸ್ತಿಗುಡಿ ಸಿನೆಮಾ ಚಿತ್ರೀಕರಣದ ವೇಳೆ ಖಳ ನಟರಾದ ಅನಿಲ್ ಹಾಗೂ ಉದಯ್ ಸಾವು ಪ್ರಕರಣದ ಹಿನ್ನೆಲೆಯಲ್ಲಿ ಐವರು ಆರೋಪಿಗಳು ದೋಷಾರೋಪ ಪಟ್ಟಿ ಹಾಗೂ ಕೆಳ ನ್ಯಾಯಾಲಯದ ವಿಚಾರಣೆ ರದ್ದುಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಆರೋಪಿಗಳಾದ ನಿರ್ಮಾಪಕ ಸುಂದರ್ ಪಿ.ಗೌಡ, ನಿರ್ದೇಶಕ ಆರ್.ನಾಗಶೇಖರ್, ಸಹಾಯಕ ನಿರ್ದೇಶಕರಾದ ಎಸ್.ಭರತ್ ರಾವ್, ಮಾರದಪ್ಪ ಮತ್ತು ಸಾಹಸ ನಿರ್ದೇಶಕ ಕೆ.ರವಿಕುಮಾರ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ನೀಡಿತು.
ಅರ್ಜಿದಾರರ ಪರ ವಾದಿಸಿದ ವಕೀಲರು, ಮಾಸ್ತಿಗುಡಿ ಸಿನೆಮಾ ಚಿತ್ರೀಕರಣದ ವೇಳೆ ಮೃತಪಟ್ಟ ಅನಿಲ್ ಹಾಗೂ ಉದಯ್ ಕುಟುಂಬದವರಿಗೆ ತಲಾ 20 ಲಕ್ಷ ರೂ.ಪರಿಹಾರ ನೀಡಲಾಗಿದೆ. ಅಲ್ಲದೆ, ಅರ್ಜಿದಾರರ ವಿರುದ್ಧ 304ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲು ಬರುವುದಿಲ್ಲ. ಆದರೂ ಪೊಲೀಸರು ಚಿತ್ರೀಕರಣದ ವೇಳೆಯಲ್ಲಿ ಅರ್ಜಿದಾರರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿ ಅರ್ಜಿದಾರರ ವಿರುದ್ಧ ಉದ್ದೇಶ ಪೂರ್ವಕವಲ್ಲದ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.
ಅರ್ಜಿದಾರರ ವಿರುದ್ಧ ಕೆಳ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಹೀಗಾಗಿ, ಈ ವಿಚಾರಣೆಗೆ ತಡೆಯಾಜ್ಞೆ ನೀಡಬೇಕು. ಇಲ್ಲವೇ ದೋಷಾರೋಪ ಪಟ್ಟಿಯನ್ನು ರದ್ದುಪಡಿಸಬೇಕೆಂದು ಪೀಠಕ್ಕೆ ತಿಳಿಸಿದರು.
ಸರಕಾರದ ಪರ ವಾದಿಸಿದ ವಕೀಲರು, ನಿರ್ಮಾಪಕ ಸುಂದರ್ ಪಿ.ಗೌಡ, ನಿರ್ದೇಶಕ ಆರ್.ನಾಗಶೇಖರ್, ಸಹಾಯಕ ನಿರ್ದೇಶಕರಾದ ಎಸ್.ಭರತ್ ರಾವ್, ಮಾರದಪ್ಪ ಮತ್ತು ಸಾಹಸ ನಿರ್ದೇಶಕ ಕೆ.ರವಿಕುಮಾರ್ ಅವರು ಮಾಸ್ತಿಗುಡಿ ಸಿನೆಮಾ ಚಿತ್ರೀಕರಣದ ವೇಳೆಯಲ್ಲಿ ನಿರ್ಲಕ್ಷ ತೋರಿದ್ದಾರೆ. ಅಲ್ಲದೆ, ಯಾವುದೇ ಮುಂಜಾಗ್ರತಾ ಕ್ರಮವನ್ನೂ ಕೈಗೊಂಡಿಲ್ಲ. ಹೀಗಾಗಿ, ಈ ಐವರು ಆರೋಪಿಗಳ ವಿರುದ್ಧ 304ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ವಕೀಲರ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠವು ಅರ್ಜಿದಾರರು ಚಿತ್ರೀಕರಣದ ವೇಳೆ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಹೀಗಾಗಿ, ಕೆಳ ನ್ಯಾಯಾಲಯದ ವಿಚಾರಣೆ ತಡೆಗೆ ನಿರಾಕರಿಸಿ ವಿಚಾರಣೆಯನ್ನು ಸೆ.19ಕ್ಕೆ ಮುಂದೂಡಿತು.