ಕ್ಯಾನ್ಸರ್ ಚಿಕಿತ್ಸೆಗಾಗಿ ಕಳವು: ಇಬ್ಬರು ಆರೋಪಿಗಳ ಬಂಧನ
ಬೆಂಗಳೂರು, ಆ.30: ರಾತ್ರಿ ವೇಳೆ ಕಂಪೆನಿಗಳಿಗೆ ನುಗ್ಗಿ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿರುವ ದಕ್ಷಿಣ ವಿಭಾಗದ ಪೊಲೀಸರು, ಪೋಷಕರಿಗೆ ಕ್ಯಾನ್ಸರ್ ರೋಗದ ಚಿಕಿತ್ಸೆಗಾಗಿ ಕಳವು ಮಾಡುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ನಗರದ ಬೇಗೂರಿನ ಪರೇಸ್ ಕುಮಾರ್ ಸಿನ್ಹ (38), ಇಲೆಕ್ಟ್ರಾನಿಕ್ ಸಿಟಿಯ ಬಿಜಯ್ ದಾಸ್(34) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಅಸ್ಸಾಂ, ತ್ರಿಪುರ ಮೂಲದ ಈ ಇಬ್ಬರು ಜು.15ರ ರಾತ್ರಿ ಜೆಪಿ ನಗರದ 3ನೆ ಹಂತದ ಮಿನಿ ಫಾರೆಸ್ಟ್‌ನ ರಿಲೇ 2 ಇಂಡಿಯಾ ಕಂಪೆನಿಯ ಕಚೇರಿಯಲ್ಲಿ ನಡೆದಿದ್ದ 21 ಲ್ಯಾಪ್‌ಟಾಪ್‌ಗಳು, 15 ಟ್ಯಾಬ್, 2 ಮೊಬೈಲ್ ಕಳವು ಪ್ರಕರಣ ಪತ್ತೆಯಾಗಿದೆ ಎಂದು ಡಿಸಿಪಿ ಎಸ್.ಬಿ.ಶರಣಪ್ಪ ಮಾಹಿತಿ ನೀಡಿದ್ದಾರೆ.
ಆರೋಪಿ ಪರೇಸ್ ಕುಮಾರ್ ಪೋಷಕರಿಗೆ ಕ್ಯಾನ್ಸರ್ ರೋಗ ಇದ್ದು, ಅದರ ಚಿಕಿತ್ಸೆಯ ವೆಚ್ಚ ಭರಿಸಲು ಬಿಜಯ್ ದಾಸ್‌ನೊಂದಿಗೆ ಸೇರಿ ಕಳವು ಮಾಡಿರುವುದು ವಿಚಾರಣೆಯಲ್ಲಿ ತಿಳಿದು ಬಂದಿದೆ. ಆರೋಪಿಗಳಿಬ್ಬರು ಭದ್ರತಾ ಸಿಬ್ಬಂದಿ ಏಜೆನ್ಸಿಯವರಿಗೆ ಮೊಬೈಲ್ ಸಂಖ್ಯೆ ಮಾತ್ರ ನೀಡಿ ರಾತ್ರಿ ಪಾಳಯದಲ್ಲಿ ಕೆಲಸ ಮಾಡುವುದಾಗಿ ಸೇರಿಕೊಳ್ಳುತ್ತಿದ್ದರು.
ಸಾಫ್ಟ್‌ವೇರ್ ಕಂಪೆನಿಗಳ ಕಚೇರಿಗಳಿರುವ ಕಟ್ಟಡಗಳಲ್ಲಿ ಕಾವಲುಗಾರರಾಗಿ ಕೆಲಸ ಮಾಡುತ್ತಾ ಅಲ್ಲಿನ ಮಾಹಿತಿಗಳನ್ನೆಲ್ಲ ತಿಳಿದುಕೊಂಡು ಮೂರು ದಿನಗಳಲ್ಲೇ ಕಳವು ಮಾಡುತ್ತಿದ್ದರು. ಬಂಧಿತರಿಂದ 25 ಲಕ್ಷ ಮೌಲ್ಯದ 24 ಲ್ಯಾಪ್‌ಟಾಪ್, 12 ಟ್ಯಾಬ್, 10 ಮಾನಿಟರ್, 2 ಮೊಬೈಲ್, 1 ಪ್ರೊಜೆಕ್ಟರ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.