×
Ad

ಆರೆಸೆಸ್ಸ್ ನಾಯಕರ ವಿವಾಹದ ಬಗ್ಗೆ ಕಾರಜೋಳ ಆಲೋಚಿಸಲಿ: ಡಾ.ಎಲ್.ಹನುಮಂತಯ್ಯ

Update: 2017-08-30 19:20 IST

ಬೆಂಗಳೂರು, ಆ.30: ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿಯ ವಿವಾಹದ ಬಗ್ಗೆ ಕಾಳಜಿ ವಹಿಸುತ್ತಿರುವ ಬಿಜೆಪಿ ಮುಖಂಡ ಗೋವಿಂದ ಕಾರಜೋಳ, ಮೊದಲು ಆರೆಸೆಸ್ಸ್ ಮುಖ್ಯಸ್ಥ ಮೋಹನ್‌ ಭಾಗವತ್ ಸೇರಿದಂತೆ ಅವರಲ್ಲಿರುವ ಇನ್ನಿತರ ಅವಿವಾಹಿತರ ಬಗ್ಗೆ ಆಲೋಚಿಸಲಿ ಎಂದು ಕೆಪಿಸಿಸಿ ಉಪಾಧ್ಯಕ್ಷ ಡಾ.ಎಲ್.ಹನುಮಂತಯ್ಯ ತಿರುಗೇಟು ನೀಡಿದ್ದಾರೆ.

ಬುಧವಾರ ನಗರದ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂಘ ಪರಿವಾರದಲ್ಲಿರುವ ಬಹುತೇಕ ನಾಯಕರು ಅವಿವಾಹಿತರು. ಅವರನ್ನು ದಲಿತ ಮಹಿಳೆಯರೊಂದಿಗೆ ವಿವಾಹ ಮಾಡಿಸುವ ಕೆಲಸವನ್ನು ಗೋವಿಂದ ಕಾರಜೋಳ ಮಾಡಲಿ ಎಂದು ಸವಾಲು ಹಾಕಿದರು.

ವೈವಾಹಿಕ ಜೀವನ ವೈಯಕ್ತಿಕವಾದದ್ದು, ಅದನ್ನು ಸಾರ್ವಜನಿಕವಾಗಿ ಚರ್ಚೆ ಮಾಡುವ ಅಗತ್ಯವಿಲ್ಲ. ಸಂಸದೆ ಶೋಭಾ ಕರಂದ್ಲಾಜೆ ವಿಚಾರದಲ್ಲೂ ನಮ್ಮ ನಿಲುವು ಅದೇ ಆಗಿದೆ. ಸಮಾಜದಲ್ಲಿ ಸಹಬಾಳ್ವೆಯ ಪದ್ಧತಿಯು ಆಚರಣೆಯಲ್ಲಿದೆ. ಅದನ್ನೆಲ್ಲ ಪ್ರಶ್ನೆ ಮಾಡಲು ಸಾಧ್ಯವೆ ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ನಾಯಕತ್ವ ಅನೇಕ ವೈಫಲ್ಯಗಳನ್ನು ಎದುರಿಸುತ್ತಿದೆ. ಸರಕಾರದ ವಿರುದ್ಧ ಮಾಡಲು ಯಾವುದೇ ಆರೋಪಗಳಿಲ್ಲದೆ, ದಲಿತರ ಮನೆಯಲ್ಲಿ ಊಟ ಮಾಡುವ ನಾಟಕವನ್ನು ಯಡಿಯೂರಪ್ಪ ನೇತೃತ್ವದ ತಂಡ ಮಾಡುತ್ತಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರವು ಬಿಜೆಪಿ ಆಡಳಿತಾವಧಿಯಲ್ಲಿ ದಲಿತರ ಕಲ್ಯಾಣಕ್ಕೆ ನೀಡಿದ ಅನುದಾನಕ್ಕಿಂತ ಮೂರು ಪಟ್ಟು ಹೆಚ್ಚು ಅನುದಾನ ನೀಡಿ, ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ ಎಂದು ತಿಳಿಸಿದರು.

ಭಡ್ತಿ ಮೀಸಲಾತಿ ವಿಚಾರದಲ್ಲಿ ದಲಿತರಿಗೆ ನ್ಯಾಯ ಕಲ್ಪಿಸಲು ರಾಜ್ಯ ಸರಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಆದರೆ, ರಾಜ್ಯಪಾಲರು ಅದಕ್ಕೆ ಒಪ್ಪಿಗೆ ನೀಡಿಲ್ಲ. ದಲಿತರ ಮನೆಗೆ ಹೋಗಿ ಊಟ ಮಾಡುವುದು, ಅವರನ್ನ ತಮ್ಮ ಮನೆಗೆ ಕರೆಸಿ ಊಟ ಹಾಕುವ ನಾಟಕ ಮಾಡುವ ಬದಲು, ಬಿಜೆಪಿ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ದಲಿತರ ಪರವಾಗಿರುವ ಸುಗ್ರೀವಾಜ್ಞೆಗೆ ಅಂಕಿತ ಹಾಕುವಂತೆ ಮನವಿ ಮಾಡಿದ್ದರೆ ಅವರನ್ನು ನಂಬಬಹುದಾಗಿತ್ತು ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿಯ ನೆರಳಂತಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿನಿಧಿಸುವ ಕ್ಷೇತ್ರದ ಆಸ್ಪತ್ರೆಯಲ್ಲಿ ನೂರಾರು ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಕಾರಣಗಳನ್ನು ಹುಡುಕಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ಒಂದು ತನಿಖೆಗೆ ಆದೇಶ ಮಾಡದೆ ಅರಾಜಕತೆಯನ್ನು ಸೃಷ್ಟಿಸಲಾಗಿದೆ ಎಂದು ಕಿಡಿಗಾರಿದರು.

ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಕೆ.ಇ.ರಾಧಾಕೃಷ್ಣ ಮಾತನಾಡಿ, ಬಿಜೆಪಿಯ ಕೊಳಕು ಮನಸ್ಥಿತಿಗೆ ಏನು ಹೇಳಬೇಕು ಗೊತ್ತಿಲ್ಲ. ದಿನಕ್ಕೆ 25 ಸಲ ಸೂಟು ಬದಲಿಸುವ, ಕೈ ಹಿಡಿದಿರುವ ಪತ್ನಿಯ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದ, ತಮ್ಮನ್ನು ವಿವೇಕಾನಂದ, ಬುದ್ಧನಿಗೆ ಹೋಲಿಸಿಕೊಳ್ಳುವ ನರೇಂದ್ರ ಮೋದಿಯನ್ನು ನಂಬುವವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದರು.

ಸಿ ಫೋರ್ ಸಮೀಕ್ಷೆ ಪ್ರಕಟಗೊಂಡ ನಂತರ ರಾಜ್ಯದಿಂದಲೇ ಬಿಜೆಪಿ ಪತನ ಆರಂಭವಾಗಲಿದೆ. ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಇಡೀ ದೇಶವನ್ನು ಏಕಮುಖ ರಾಜಕೀಯ ವ್ಯವಸ್ಥೆಗೆ ತರಲು ಪ್ರಯತ್ನಿಸುತ್ತಿದ್ದಾರೆ. ಘೋಷಣೆಗಳ ಪ್ರಧಾನಿಯ ಹೆಸರು ಹೇಳಿಕೊಂಡು ರಾಜ್ಯದ ಜನತೆಯ ದಿಕ್ಕು ತಪ್ಪಿಸಲು ಬಿಜೆಪಿ ಮುಖಂಡರು ನಡೆಸುತ್ತಿರುವ ಯತ್ನ ಸಫಲವಾಗುವುದಿಲ್ಲ ಎಂದರು.

ಗೋವಿಂದ ಕಾರಜೋಳ, ರಾಹುಲ್‌ ಗಾಂಧಿಯ ವಿವಾಹದ ಬಗ್ಗೆ ಮಾತನಾಡದೆ, ಅಂತರ್ ಜಾತೀಯ, ಅಂತರ್ ಧರ್ಮೀಯ ವಿವಾಹಗಳನ್ನು ಮಾಡುವ ವೇದಿಕೆಯನ್ನು ಸೃಷ್ಟಿ ಮಾಡಲಿ. ಅದರಿಂದ ಸಾಮಾಜಿಕ ಬದಲಾವಣೆಯಾದರೂ ಆಗುತ್ತದೆ. ಅದನ್ನು ಬಿಟ್ಟು ಈ ರೀತಿಯ ಕುಚೋದ್ಯದ ಹೇಳಿಕೆ ನೀಡುವುದು ಅವರ ಘನತೆಗೆ ಶೋಭೆ ತರುವುದಿಲ್ಲ ಎಂದು ತಿಳಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಬ್ರಾಹ್ಮಣರು, ಲಿಂಗಾಯತರು, ಒಕ್ಕಲಿಗರನ್ನು ತಮ್ಮ ಮನೆಗೆ ಕರೆಸಿ ಊಟ ಹಾಕಿಸಿದರೆ ಪ್ರಚಾರ ಪಡೆಯದವರು, ದಲಿತರನ್ನು ಆಹ್ವಾನಿಸಿ ಪ್ರಚಾರಗಿಟ್ಟಿಸಿಕೊಳ್ಳುವ ಅಗತ್ಯವೇನಿದೆ. ದಲಿತರನ್ನು ಈಗಲೂ ನಿಕೃಷ್ಟರು, ಅನಿಷ್ಟರು ಎಂಬುದು ಬಿಜೆಪಿ ಮುಖಂಡ ಅನಿಸಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಎಸ್ಸಿ-ಎಸ್ಟಿ ವಿಭಾಗದ ಅಧ್ಯಕ್ಷ ಎಫ್.ಎಚ್.ಜಕ್ಕಪ್ಪ, ಕೆಪಿಸಿಸಿ ಕಾರ್ಯದರ್ಶಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News