×
Ad

ಗುಣಮಟ್ಟದ ಹಾಲು ಒದಗಿಸುತ್ತಿರುವುದರಿಂದ ಮಕ್ಕಳು ಹಿಂದಿಗಿಂತ ಹೆಚ್ಚು ಆರೋಗ್ಯವಾಗಿದ್ದಾರೆ: ಎ.ಮಂಜು

Update: 2017-08-30 19:40 IST

ಬೆಂಗಳೂರು, ಆ.30: ರಾಜ್ಯದ ಶಾಲಾ ಮಕ್ಕಳಿಗೆ ಗುಣಮಟ್ಟದ ಹಾಲು ಒದಗಿಸುತ್ತಿರುವುದರಿಂದ ಮಕ್ಕಳು ಹಿಂದಿಗಿಂತ ಹೆಚ್ಚು ಆರೋಗ್ಯಕರವಾಗಿದ್ದಾರೆ ಎಂದು ಪಶುಸಂಗೋಪನಾ ಸಚಿವ ಎ.ಮಂಜು ಹೇಳಿದ್ದಾರೆ.

ಬುಧವಾರ ಪುಲಕೇಶಿನಗರದಲ್ಲಿ ಆನ್‌ ಲೈನ್ ಮಾರುಕಟ್ಟೆ ತಾಣ (ಇಕಾಮರ್ಸ್) ಅಮೆಝಾನ್ ಇಂಡಿಯಾ ಸಂಸ್ಥೆಯು ಅಕ್ಷಯಪಾತ್ರೆ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಸರಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ಉಚಿತವಾಗಿ ಹಾಲು ಪೂರೈಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಾನೂ ಹಳ್ಳಿಯಲ್ಲಿ ಹುಟ್ಟಿ, ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಬೆಳೆದವನು. ಸರಕಾರಿ ಶಾಲೆಯ ಮಕ್ಕಳ ಪರಿಸ್ಥಿತಿಯ ಬಗ್ಗೆ ನನಗೆ ಅರಿವಿದೆ. ಪೌಷ್ಟಿಕ ಕೊರತೆಯು ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರಿ ಮಕ್ಕಳ ಭವಿಷ್ಯ ಹಾಳುಗೆಡವುತ್ತಿದೆ. ಗುಣಮಟ್ಟದ ಹಾಲು ಒದಗಿಸುತ್ತಿರುವುದರಿಂದ ಮಕ್ಕಳು ಹಿಂದಿಗಿಂತ ಹೆಚ್ಚು ಆರೋಗ್ಯಕರವಾಗಿದ್ದಾರೆ ಎಂದು ನುಡಿದರು.

ಸರಕಾರ ಉಚಿತವಾಗಿ ಶಿಕ್ಷಣ ನೀಡುತ್ತಿದೆ. ಬಟ್ಟೆ, ಶೂ, ಪಠ್ಯಪುಸ್ತಕ, ಬಿಸಿಯೂಟ ಹಾಗೂ ಹಾಲು ನೀಡುತ್ತಿದೆ. ವಿದ್ಯಾರ್ಥಿಗಳು ಈ ಸೌಲಭ್ಯಗಳ ಲಾಭ ಪಡೆದು ವಿದ್ಯಾವಂತರಾಗಬೇಕು ಎಂದು ಹೇಳಿದರು.

ಅಮೆಝಾನ್ ಇಂಡಿಯಾ ಸೆಲ್ಲರ್ ಸರ್ವೀಸಸ್ ನಿರ್ದೇಶಕ ಗೋಪಾಲ್ ಪಿಳ್ಳೈ ಮಾತನಾಡಿ, ಸರಕಾರಿ ಶಾಲೆಗಳ ಮಕ್ಕಳಲ್ಲಿ ಪೌಷ್ಟಿಕ ಕೊರತೆ ಕಂಡುಬರುತ್ತಿದೆ. ಬಡತನವೇ ಅದಕ್ಕೆ ಕಾರಣ. ಹೀಗಾಗಿ, ಗುಣಮಟ್ಟದ ಹಾಲು ಪೂರೈಸುವ ಮೂಲಕ ಮಕ್ಕಳಿಗೆ ಸಣ್ಣ ಮಟ್ಟದಲ್ಲಿ ಸಹಾಯ ಮಾಡಲು ಮುಂದಾಗಿದ್ದೇವೆ ಎಂದರು.

ರಾಜ್ಯ ಸರಕಾರ ಈಗಾಗಲೇ ಕ್ಷೀರಭಾಗ್ಯ ಯೋಜನೆಯಡಿ ವಾರದ ಐದು ದಿನಗಳಲ್ಲಿ ಸರಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ನಂದಿನಿ ಹಾಲನ್ನು ಪೂರೈಸುತ್ತಿದೆ. ಅದಕ್ಕೆ ಬದಲಾಗಿ ನಗರ ವ್ಯಾಪ್ತಿಯ 1,300 ಸರಕಾರಿ ಹಾಗೂ ಅನುದಾನಿತ ಶಾಲೆಗಳ 1.70 ಲಕ್ಷ ಮಕ್ಕಳಿಗೆ ಹಾಲಿನ ಟೆಟ್ರಾ ಪ್ಯಾಕ್‌ಗಳಲ್ಲಿ ಸಂಸ್ಕರಿಸಿದ ಹಾಲನ್ನು ಅಮೆಝಾನ್ ಹಾಗೂ ಅಕ್ಷಯಪಾತ್ರೆ ಪ್ರತಿಷ್ಠಾನವು ಸರಕಾರದ ಜತೆಗೂಡಿ ಉಚಿತವಾಗಿ ನೀಡಲು ಮುಂದಾಗಿದೆ ಎಂದು ಮಾಹಿತಿ ನೀಡಿದರು.

ರವಿವಾರ ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲಿ ಪ್ರತಿ ಮಕ್ಕಳಿಗೆ ದಿನಕ್ಕೆ 150 ಎಂಎಲ್ ಹಾಲು ನೀಡಲಾಗುತ್ತದೆ. ಇದಕ್ಕೆ ತಗಲುವ ವೆಚ್ಚವನ್ನು ಅಮೆಜಾನ್ ಕಂಪೆನಿಯು ತನ್ನ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್) ಭರಿಸಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ವಿಷನ್ ಗ್ರೂಪಿನ ಸದಸ್ಯ ಮೆಹ್ರೋಝ್ ಖಾನ್, ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಬಿಬಿಎಂಪಿ ಸದಸ್ಯ ಎ.ಆರ್.ಝಾಕೀರ್, ಅಕ್ಷಯಪಾತ್ರೆ ಫೌಂಡೇಶನ್ ಸಿಇಒ ಶ್ರೀಧರ್‌ವೆಂಕಟ್ ಸೇರಿ ಪ್ರಮುಖರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News