ಪ್ರತಿ ಸರಕಾರಗಳಿಂದ ಎರಡೆರಡು ಅಪರಾಧ: ಎಚ್.ಎಸ್.ದೊರೆಸ್ವಾಮಿ ಕಳವಳ
ಬೆಂಗಳೂರು, ಆ.30: ಸಂಗ್ರಹವಾಗುವ ತೆರಿಗೆಯಲ್ಲಿನ ಸೋರಿಕೆಯನ್ನು ತಡೆಯದೆ ಹೊಸ ತೆರಿಗೆ ನೀತಿಗಳನ್ನು ಜಾರಿಗೆ ತರುತ್ತಿರುವ ಸರಕಾರಗಳು 40 ವರ್ಷಗಳಿಂದ ಎರಡೆರಡು ಅಪರಾಧಗಳನ್ನು ಎಸುಗುತ್ತಿವೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಬುಧವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸ್ವಾಮಿ ವಿವೇಕಾನಂದ ವಿಚಾರ ವೇದಿಕೆ ಆಯೋಜಿಸಿದ್ದ 18ನೆ ವರ್ಷದ ಸಾಂಸ್ಕೃತಿಕ ಸಂಭ್ರಮ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಶಾಂತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವರ್ಷವೊಂದರಲ್ಲಿ ಸಂಗ್ರಹವಾಗುತ್ತಿರುವ ತೆರಿಗೆಯಲ್ಲಿ 1.5 ಲಕ್ಷ ಕೋಟಿ ರೂ. ಸೋರಿಕೆಯಾಗುತ್ತಿದೆ. ಸಂಗ್ರಹವಾಗುವ ತೆರಿಗೆ ಸಾರ್ವಜನಿಕ ಬಳಕೆಗೆ ಸಮರ್ಪಕವಾಗಿ ವಿನಿಯೋಗವಾಗುತ್ತಿಲ್ಲ. ಸೋರಿಕೆಯನ್ನು ತಡೆಯದೆ ಹೊಸ ತೆರಿಗೆ ನೀತಿಗಳನ್ನು ಜಾರಿಗೆ ತರುವ ಮೂಲಕ ಎಲ್ಲ ಸರಕಾರ ಒಟ್ಟಿಗೆ ಎರಡು ಅಪರಾಧಗಳನ್ನು ಎಸಗುತ್ತಿವೆ ಎಂದು ಕಿಡಿಕಾರಿದರು.
ಸರಕಾರ ಘೋಷಣೆ ಮಾಡುವ ಯೋಜನೆಗಳಿಗೆ ಬಿಡುಗಡೆಯಾಗುವ ಅನುದಾನದಲ್ಲಿ ಒಟ್ಟು 7 ಲಕ್ಷ ಕೋಟಿ ರೂ.ನಷ್ಟವಾಗುತ್ತಿದೆ. ಆಹಾರ ಧಾನ್ಯಗಳ ವಿತರಣೆಯಲ್ಲಿ ಶೇ 23.9ರಷ್ಟು ಆಹಾರ ಧಾನ್ಯಗಳು ಅನರ್ಹರ ಪಾಲಾಗುತ್ತಿವೆ. ನಷ್ಟದ ನೆಪದಲ್ಲಿ ಸಾರ್ವಜನಿಕ ವಲಯ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆ. ದೇಶದಲ್ಲಿ ಉತ್ಪತ್ತ್ತಿಯಾಗುತ್ತಿರುವ ವಿದ್ಯುತ್ ಪ್ರಮಾಣದಲ್ಲಿ ಅರ್ಧದಷ್ಟು ವಿದ್ಯುತ್ ಸೋರಿಕೆಯಾಗುತ್ತಿದೆ. ಈ ಎಲ್ಲ ಸಮಸ್ಯೆಗಳ ವಿರುದ್ಧ ನಾವು ಇನ್ನೂ ಜಾಗೃತರಾಗದೇ ಇರುವುದರಿಂದ ಈ ತಪ್ಪುಗಳು ಮರುಕಳಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ನಷ್ಟ ಸೋರಿಕೆಯನ್ನು ತಡೆಗಟ್ಟದ ಪಕ್ಷಗಳಿಗೆ ನಾವು ಮತ ಹಾಕಬೇಕೇ ಎಂದು ಸಭಿಕರಲ್ಲಿ ಪ್ರಶ್ನಿಸಿದ ಅವರು, ದೇಶ ರಕ್ಷಣೆಗಾಗಿ ಈ ಎಲ್ಲ ಅಪರಾಧಗಳ ವಿರುದ್ಧ ಸಂಘ-ಸಂಸ್ಥೆಗಳು, ಯುವಕರು, ವಿಚಾರವಂತರು ಹೋರಾಟ ನಡೆಸಲು ಪಣ ತೊಡಬೇಕು ಎಂದು ಕರೆಕೊಟ್ಟರು.
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ತೋಪಯ್ಯ, ಡಾ.ರವೀಂದ್ರ, ಚಂದ್ರಶೇಖರ್, ಕೆ.ಮೋಹನ್, ರಾಜಗೋಪಾಲ್, ರವಿಶಂಕರ್, ಸುಮನ್ ನಾರಾಯಣ್ ಅವರಿಗೆ ಶಾಂತಿ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಂಸದ ಕೊದಂಡ ರಾಮಯ್ಯ, ವಿವೇಕಾನಂದ ವಿಚಾರ ವೇದಿಕೆಯ ಅಧ್ಯಕ್ಷ ಸಿ.ಕೆ.ರವಿಚಂದ್ರ ಸೇರಿದಂತೆ ಇತರರು ಇದ್ದರು.