ಖಾಸಗಿ ಕಂಪೆನಿಗೆ 215.75 ಕೋಟಿ ದಂಡ ಪಾವತಿಗೆ ಜಾರಿಗೊಳಿಸಿದ್ದ ನೋಟಿಸ್ ರದ್ದು ಪಡಿಸಿದ ಹೈಕೋರ್ಟ್
ಬೆಂಗಳೂರು, ಆ.30: ಮಾಜಿ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಅವರ ವರದಿ ಆಧರಿಸಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಅಕ್ರಮವಾಗಿ ಕಬ್ಬಿಣದ ಅದಿರು ಗಣಿಗಾರಿಕೆ ನಡೆಸಿದ ಆರೋಪ ಸಂಬಂಧ 215.75 ಕೋಟಿ ರೂ. ದಂಡ ಪಾವತಿಸುವಂತೆ ದೀಪ್‌ಚಂದ್ ಕಿಶೆನ್‌ಲಾಲ್ ಕಂಪನಿಗೆ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ ಜಾರಿ ಮಾಡಿದ್ದ ನೋಟಿಸ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ ಜಾರಿ ಮಾಡಿದ್ದ ನೋಟಿಸ್ ರದ್ದುಪಡಿಸುವಂತೆ ಕೋರಿ ಮೆಸರ್ಸ್ ದೀಪ್ ಚಂದ್ ಕಿಶೆನ್‌ಲಾಲ್ ಕಂಪೆನಿ ಸಲ್ಲಿಸಿದ್ದ ತಕರಾರು ಅರ್ಜಿ ಪುರಸ್ಕರಿಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
2003ರಿಂದ 2008ರ ಅವಧಿಯಲ್ಲಿ ಚಿಕ್ಕನಾಯಕನಹಳ್ಳಿಯ 310 ಎಕರೆ ಪ್ರದೇಶದಲ್ಲಿ ಅಕ್ರಮವಾಗಿ ಕಬ್ಬಿಣದ ಅದಿರು ಗಣಿಗಾರಿಕೆ ನಡೆಸಿದ ಹಿನ್ನೆಲೆಯಲ್ಲಿ 215.75 ಕೋಟಿ ರೂ.ಅನ್ನು ದೀಪ್ ಚಂದ್ ಕಿಶೆನ್‌ಲಾಲ್ ಕಂಪೆನಿಯಿಂದ ವಸೂಲಿ ಮಾಡಬೇಕು ಎಂದು ಮಾಜಿ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಅವರು 2011ರ ಜುಲೈ 27ರಂದು ಸರಕಾರಕ್ಕೆ ವರದಿ ಸಲ್ಲಿಸಿದ್ದರು. ಈ ವರದಿ ಆಧರಿಸಿ ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರು 2016ರ ನವೆಂಬರ್ 2 ಮತ್ತು 28ರಂದು ಕಂಪೆನಿಗೆ ನೋಟಿಸ್ ಜಾರಿ ಮಾಡಿ, ಅಕ್ರಮ ಗಣಿಗಾರಿಕೆ ನಡೆಸಿ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದಕ್ಕೆ 215.75 ಕೋಟಿ ರೂ. ಪಾವತಿಸುವಂತೆ ಸೂಚಿಸಿತ್ತು. ಈ ನೋಟಿಸ್ ಪ್ರಶ್ನಿಸಿ ಕಂಪೆನಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸುಪ್ರೀಂ ಕೊರ್ಟ್ 2013ರಲ್ಲಿ ನೀಡಿದ್ದ ನಿರ್ದೇಶನದ ಮೇರೆಗೆ ಕಂಪೆನಿಗೆ ನೀಡಿದ್ದ ಗಣಿ ಪರವಾನಗಿ ರದ್ದುಪಡಿಸಲಾಗಿದೆ ಎಂದು ಸರಕಾರ ಹೇಳುತ್ತದೆ. ಅಂದರೆ 2013ರಲ್ಲಿ ಕಂಪೆನಿ ಗಣಿ ಪರವಾನಿಗೆ ಹೊಂದಿತ್ತು ಎಂದು ತಿಳಿದು ಬರುತ್ತದೆ. ಮತ್ತೊಂದೆ ಕಂಪೆನಿ 1974ರಿಂದ 1994ರವರೆಗೆ ಮಾತ್ರ ಗಣಿ ಪರವಾನಿಗೆ ಹೊಂದಿತ್ತು. ಆದರೆ, ಅದನ್ನು 2002ರಿಂದ ಪರವಾನಿಗೆ ನೀಡಲಾಗಿತ್ತು ಎಂದು ದಾಖಲೆಗಳಲ್ಲಿ ತಪ್ಪಾಗಿ ನಮೂದಾಗಿದೆ ಎಂದು ಸರಕಾರವೇ ಒಪ್ಪಿಕೊಳ್ಳುತ್ತದೆ. ಅಂದರೆ 2003ರಿಂದ 2008ವರಗೆ ಗಣಿ ಪರವಾನಗಿ ಹೊಂದಿರಲಿಲ್ಲ ಎಂದು ಹೇಳಲು ಹೇಗೆ ಸಾಧ್ಯ. ಸರಕಾರದ ಹೇಳಿಕೆಗಳು ಪರಸ್ಪರ ವಿರುದ್ಧವಾಗಿದೆ. ಖಾಸಗಿ ಕಂಪೆನಿಯಿಂದ ಇಂತಿಷ್ಟೇ ನಷ್ಟವಾಗಿದೆ ಎಂದು ಲೋಕಾಯುಕ್ತ ವರದಿಯ ಮೇಲೆ ಹೇಳಲಾಗದು ಮತ್ತು ಲೋಕಾಯುಕ್ತಕ್ಕೆ ಆ ಅಧಿಕಾರ ವ್ಯಾಪ್ತಿಯೂ ಇಲ್ಲ ಎಂದು ಅಭಿಪ್ರಾಯಪಟ್ಟು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರ ನೋಟಿಸ್ ರದ್ದುಪಡಿಸಿತು.