×
Ad

ಬಿಎಸ್‌ವೈ ವಿರುದ್ಧದ ಡಿ-ನೋಟಿಫಿಕೇಷನ್ ಪ್ರಕರಣ: ಆ.31ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್

Update: 2017-08-30 20:51 IST

ಬೆಂಗಳೂರು, ಆ.30: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಅಧಿಕಾರದ ಅವಧಿಯಲ್ಲಿ 27 ಅರ್ಜಿಗಳನ್ನು ಪಡೆದು ಡಾ.ಕೆ.ಶಿವರಾಮ ಕಾರಂತ ಬಡಾವಣೆಯಲ್ಲಿ 257 ಎಕರೆ 20.5 ಗುಂಟೆ ಜಮೀನನ್ನು ಅಕ್ರಮವಾಗಿ ಡಿ-ನೋಟಿಫಿಕೇಷನ್ ಮಾಡಲು ಆದೇಶ ಮಾಡಿದ್ದಾರೆ. ಬಿಡಿಎ ಕೂಡ ಜಮೀನನ್ನು ಭೂ ಸ್ವಾಧೀನದಿಂದ ಕೈ ಬಿಟ್ಟಿರುವುದು ಕಾನೂನು ಬಾಹಿರವಾಗಿದೆ. ಹೀಗಾಗಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ವರದಿ ಸಲ್ಲಿಸಿದ್ದರು ಎಂದು ಎಸಿಬಿ ಹೈಕೋರ್ಟ್ ಗಮನಕ್ಕೆ ತಂದಿದೆ. ಅಲ್ಲದೆ, ಹೈಕೋರ್ಟ್ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ.

ಡಾ.ಕೆ.ಶಿವರಾಮ ಕಾರಂತ ಬಡಾವಣೆಯ ಡಿ-ನೋಟಿಫಿಕೇಷನ್ ಪ್ರಕರಣ ಸಂಬಂಧ ತಮ್ಮ ವಿರುದ್ಧ ಎಸಿಬಿ ದಾಖಲಿಸಿರುವ ಎರಡು ಎಫ್‌ಐಆರ್‌ಗಳ ರದ್ದು ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ನ್ಯಾಯಪೀಠಕ್ಕೆ ಎಸಿಬಿ ಪರ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಈ ವಿಷಯ ತಿಳಿಸಿದರು.

ಯಡಿಯೂರಪ್ಪ ನೀಡಿದ ಸೂಚನೆ ಮೇರೆಗೆ ಬಿಡಿಎ ಅಧಿಕಾರಿಗಳು ಡಾ.ಶಿವರಾಮ ಕಾರಂತ ಬಡಾವಣೆಗೆ ವಶಪಡಿಸಿಕೊಂಡಿದ್ದ ಸುಮಾರು 3340 ಎಕರೆ ಜಮೀನು ಪೈಕಿ 257 ಎಕರೆ 20.5 ಗುಂಟೆ ಜಮೀನನ್ನು ಭೂ ಸ್ವಾಧೀನದಿಂದ ಕೈ ಬಿಟ್ಟಿದ್ದಾರೆ. ಅದಕ್ಕೆ ಅಧ್ಯಾದೇಶ ಹೊರಡಿಸಿಲ್ಲ. ಯಡಿಯೂರಪ್ಪ ಅವರ ನಿರ್ದೇಶನವಿದ್ದ ಕಾರಣ ಕೇವಲ ಭೂ ಮಾಲಕರಿಗೆ ಹಿಂಬರಹ ನೀಡಿ, ಭೂ ಸ್ವಾಧೀನದಿಂದ ಜಮೀನು ಕೈ ಬಿಡಲಾಗಿದೆ. ಈ ಬಗ್ಗೆ ಡಿ.ವಿ. ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಸಿಐಡಿ ತನಿಖೆಗೆ ಆದೇಶಿಸಲು ನಿರ್ದೇಶಿಸಿದ್ದರೂ ಎಫ್‌ಐಆರ್ ದಾಖಲಾಗಲಿಲ್ಲ. ಅವರ ನಂತರ ಮುಖ್ಯಮಂತ್ರಿಯಾದವರು ಸಿಐಡಿ ತನಿಖೆಗೆ ವಹಿಸದೆ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಯ ತನಿಖೆಗೆ ಆದೇಶಿಸಿದ್ದರು ಎಂದು ತಿಳಿಸಿದರು.

ತನಿಖೆ ನಡೆಸಿದ್ದ ಮುಖ್ಯ ಕಾರ್ಯದರ್ಶಿಯು, ಕಾನೂನು ಬಾಹಿರವಾಗಿ ಭೂ ಸ್ವಾಧೀನದಿಂದ ಜಮೀನು ಕೈ ಬಿಡಲಾಗಿದೆ. ಭೂ ಸ್ವಾಧೀನದಿಂದ ಕೈ ಬಿಟ್ಟ ಜಮೀನನ್ನು ಪರಿವರ್ತನೆ ಮಾಡಿ ಮಾರಾಟ ಮಾಡಲಾಗಿದೆ. ಕೆಲವೆಡೆ ಅನಧಿಕೃತ ಬಡಾವಣೆಗಳು, ಖಾಸಗಿ ವಸತಿ ಸಂಕೀರ್ಣ, ವಾಣಿಜ್ಯ ಮನೆಗಳು ನಿರ್ಮಾಣಗೊಂಡಿವೆ. ಹೀಗಾಗಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಸರಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಉಲ್ಲೇಖಿಸಿದ್ದರು.

ಪ್ರಕರಣದಲ್ಲಿ ಯಡಿಯೂರಪ್ಪ ಅಮಾಯಕರಲ್ಲ. ಈ ಹಿನ್ನೆಲೆಯಲ್ಲಿ ದೂರುದಾರರು ಎಸಿಬಿಗೆ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆಗೆ ಮುಂದಾಗಿದ್ದಾರೆ. ಈ ತನಿಖೆಯಲ್ಲಿ ನ್ಯಾಯಾಂಗ ಮಧ್ಯಪ್ರವೇಶ ಮಾಡಬಾರದು ಮತ್ತು ಅರ್ಜಿ ವಜಾಗೊಳಿಸಬೇಕು ಎಂದು ರವಿಮರ್ವ ಕುಮಾರ್ ಕೋರಿದರು.

ಎಸಿಬಿ ಪರ ವಾದ ಆಲಿಸಿದ ನ್ಯಾಯಪೀಠವು ಅರ್ಜಿ ವಿಚಾರಣೆ ಗುರುವಾರಕ್ಕೆ ಮುಂದೂಡಿದ್ದು. ಅಲ್ಲಿಯವರಿಗೆ ಯಡಿಯೂರಪ್ಪ ಅವರನ್ನು ಬಂಧಿಸದಂತೆ ಎಸಿಬಿಗೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News