×
Ad

ಮನೆಗಳ ತೆರವಿಗೆ ಮುಂದಾದ ಸೇನೆ: ಉದ್ವಿಗ್ನ ಪರಿಸ್ಥಿತಿ

Update: 2017-08-30 22:20 IST

ಬೆಂಗಳೂರು, ಆ.30: ಇಲ್ಲಿನ ಜೆ.ಸಿ.ನಗರದ ಮೋದಿ ಗಾರ್ಡನ್ ಸಮೀಪದ ಮಸೀದಿ ಮತ್ತು ಆಂಜನೇಯ ದೇವಸ್ಥಾನದ ಬಳಿಯ ಮನೆಗಳ ತೆರವಿಗೆ ಸೇನಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರಿಂದ, ಸೇನೆಯ ಸಿಬ್ಬಂದಿ ಮತ್ತು ಸ್ಥಳೀಯ ನಿವಾಸಿಗಳ ನಡುವೆ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.

ಕಾನೂನು ಉಲ್ಲಂಘಿಸಿ ಸೇನೆಯ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಬುಧವಾರ ಬೆಳಗ್ಗೆ 11ರ ಸುಮಾರಿಗೆ ಜೆ.ಸಿ.ಬಿ ಯಂತ್ರದ ಸಮೇತ ಸ್ಥಳಕ್ಕೆ ಬಂದ ಅರೆಸೇನಾ ತುಕಡಿಯ ಸಿಬ್ಬಂದಿಯು ಮಸೀದಿ ಸುತ್ತಲಿನ ಮೂರು ಮನೆ, ಕಿರಾಣಿ ಅಂಗಡಿ, ಆಂಜನೇಯ ದೇವಸ್ಥಾನ ಬಳಿಯ ಮನೆಯನ್ನು ಖಾಲಿ ಮಾಡುವಂತೆ ಹೇಳಿದರು.

ಇದರಿಂದ ಗಾಬರಿಗೊಂಡ ಸ್ಥಳೀಯ ನಿವಾಸಿಗಳು, ಮನೆಯಿಂದ ಹೊರಬಂದು ಸಿಬ್ಬಂದಿಯ ವರ್ತನೆಯನ್ನು ಪ್ರಶ್ನಿಸಿದಾಗ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಬಂದ ಜೆ.ಸಿ.ನಗರ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ಮಣ್ಣು ಸುರಿದರು: ಮಧ್ಯಾಹ್ನ 12:15 ಸುಮಾರಿಗೆ ಸೇನೆಯ ಸಿಬ್ಬಂದಿಯು ಟಿಪ್ಪರ್ ವಾಹನದಲ್ಲಿ ಮಣ್ಣು ತುಂಬಿಕೊಂಡು ಬಂದು, ನಿವಾಸಿಗಳು ಓಡಾಡುವ ರಸ್ತೆಗೆ ಸುರಿದರು. ಇದರಿಂದಾಗಿ ರಸ್ತೆಯಲ್ಲಿ ನಿತ್ಯವೂ ಓಡಾಡುತ್ತಿದ್ದ ಜನರಿಗೆ ತೊಂದರೆ ಉಂಟಾಯಿತು. ಆಗ ನಿವಾಸಿಗಳ ಪರ ನಿಂತ ಸ್ಥಳೀಯರು, ಸೇನೆಯ ವರ್ತನೆಯನ್ನು ಖಂಡಿಸಿ ಪ್ರತಿಭಟನೆ ಆರಂಭಿಸಿದರು. ಬಳಿಕ ಇಬ್ಬರ ನಡುವೆ ಪರಸ್ಪರ ನೂಕಾಟ ತಳ್ಳಾಟ ಉಂಟಾಯಿತು ಎಂದು ಮೂಲಗಳು ತಿಳಿಸಿವೆ.

ಮಧ್ಯಾಹ್ನ 3 ಗಂಟೆಯವರೆಗೂ ಸೇನೆ ಸಿಬ್ಬಂದಿ ಹಾಗೂ ಸ್ಥಳೀಯರು ನಡುವಿನ ಗಲಾಟೆ ಉಂಟಾಗಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಘಟನೆ ಸಂಬಂಧ ಸ್ಥಳಕ್ಕೆ ಬಂದ ಶಾಸಕ ಝಮೀರ್ ಅಹ್ಮದ್, ಸ್ಥಳೀಯ ಮುಖಂಡರು ಹಾಗೂ ಸೇನೆ ಅಧಿಕಾರಿಗಳೊಂದಿಗೆ ಜತೆ ಸಂಧಾನ ನಡೆಸಿ ರಸ್ತೆಯಲ್ಲಿದ್ದ ಮಣ್ಣನ್ನು ತೆರವುಗೊಳಿಸಿ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟರು.

ಸೇನೆ ವಿರುದ್ಧ ಅಸಮಾಧಾನ: ಜಾಗ ತೆರವು ಸಂಬಂಧ ಸೇನೆಯ ಅಧಿಕಾರಿಗಳು, ಹಲವು ವರ್ಷಗಳಿಂದ ನೋಟಿಸ್ ನೀಡುತ್ತಿದ್ದಾರೆ. ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದೇವೆ. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯವು ಸೂಚನೆ ನೀಡಿದ್ದು, ಆದೇಶ ಪ್ರತಿ ಕೈ ಸೇರಬೇಕಿದೆ. ಅದರ ಮಧ್ಯೆಯೇ ಸೇನಾ ಸಿಬ್ಬಂದಿ ಸ್ಥಳಕ್ಕೆ ಬಂದು ತೆರವು ಮಾಡುತ್ತಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.

ಜಾಗದ ವಿವಾದ ಹೈಕೋರ್ಟ್‌ನಲ್ಲಿದೆ. ಈ ಬಗ್ಗೆ ಆದೇಶವಾಗಿದ್ದು, ಅದನ್ನು ಸೇನೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಅವರು ಆದೇಶ ಪ್ರತಿ ತೋರಿಸುವಂತೆ ಹೇಳಿದ್ದಾರೆ. ಹೈಕೋರ್ಟ್ ಪ್ರತಿ ಕೈಗೆ ಸಿಕ್ಕಿಲ್ಲ. ಸಿಕ್ಕ ಬಳಿಕ ತೋರಿಸುವುದಾಗಿ ಕಾಲಾವಕಾಶ ಪಡೆದಿದ್ದೇವೆ. ಹಬ್ಬದ ಬಳಿಕ ಮತ್ತೊಮ್ಮೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದೇವೆ.
-ಝಮೀರ್ ಅಹ್ಮದ್, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News