ಆಧಾರ್ ಸಂಪರ್ಕ ಅವಧಿ ವಿಸ್ತರಣೆ

Update: 2017-08-31 05:00 GMT

ಹೊಸದಿಲ್ಲಿ, ಆ.31: ಖಾಸಗಿತನದ ಹಕ್ಕು ಉಲ್ಲಂಘನೆ ಹಿನ್ನೆಲೆಯಲ್ಲಿ ಆಧಾರ್ ಕ್ರಮಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ಹಂತದಲ್ಲಿ ಬಾಕಿ ಇರುವುದರಿಂದ, ಸರ್ಕಾರಿ ಯೋಜನೆಗಳಿಗೆ ಆಧಾರ್ ಸಂಖ್ಯೆಯ ಸಂಪರ್ಕ ಕಲ್ಪಿಸಲು ಕೇಂದ್ರ ಸರ್ಕಾರ ವಿಧಿಸಿದ್ದ ಗಡುವನ್ನು ಸೆಪ್ಟೆಂಬರ್ 30ರಿಂದ ಡಿಸೆಂಬರ್ 31ರವರೆಗೆ ವಿಸ್ತರಿಸಲು ನಿರ್ಧರಿಸಿದೆ.

ಈ ಸಂಬಂಧ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು, ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ ಅಮಿತವ್‌ರಾಯ್ ಮತ್ತು ಎ.ಎಂ.ಖನ್ವೀಲ್ಕರ್ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ಮಾಹಿತಿ ನೀಡಿದರು. ಆಧಾರ್ ಕ್ರಮಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಿರುವ 20ಕ್ಕೂ ಹೆಚ್ಚು ಅರ್ಜಿಗಳು ವಿಚಾರಣೆಗೆ ಬಾಕಿ ಇರುವ ಹಿನ್ನೆಲೆಯಲ್ಲಿ ತ್ವರಿತವಾಗಿ ವಿಚಾರಣೆ ನಡೆಸುವಂತೆ ವಕೀಲ ಶ್ಯಾಮ್ ದಿವಾನ್ ಕೋರಿದ್ದರು.

ಇದು ಅಂಥ ಎರಡನೇ ವಿಸ್ತರಣೆಯಾಗಿದೆ. ಸರ್ಕಾರದ ಸಮಾಜ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆಯಲು ಎಲ್ಲ ನಾಗರಿಕರು ಜೂನ್ 30ರೊಳಗೆ ಆಧಾರ್ ಸಂಖ್ಯೆಯನ್ನು ಜೂನ್ 30ರೊಳಗೆ ಕಡ್ಡಾಯವಾಗಿ ನೀಡಬೇಕು ಎಂದು ಕೇಂದ್ರ ಸರ್ಕಾರ ಈ ಮೊದಲು ಸೂಚನೆ ನೀಡಿತ್ತು. ಬಳಿಕ ಅದನ್ನು ಸೆಪ್ಟೆಂಬರ್ 30ಕ್ಕೆ ವಿಸ್ತರಿಸಲಾಗಿತ್ತು.

ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಖಾಸಗೀತನದ ಹಕ್ಕನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಿ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ದಿವಾನ್ ಈ ಮನವಿ ಮಾಡಿಕೊಂಡಿದ್ದರು. ಪ್ರಕರಣದ ವಿಚಾರಣೆಯನ್ನು ನವೆಂಬರ್ ಮೊದಲ ವಾರ ಕೈಗೊಳ್ಳುವುದಾಗಿ ನ್ಯಾಯಪೀಠ ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News