11 ಮಂದಿಯೂ ಮ್ಯಾನ್ ಆಫ್ ದ ಮ್ಯಾಚ್!

Update: 2017-09-02 04:40 GMT

ಲಂಡನ್, ಸೆ. 2: ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಕ್ರಿಕೆಟ್ ಪಂದ್ಯವೊಂದರಲ್ಲಿ ಬ್ಯಾಟ್ಸ್‌ಮನ್ ವಿಚಿತ್ರವಾಗಿ ಔಟ್ ಆದರು. ಮಧ್ಯದ ವಿಕೆಟ್ ಉರುಳಿದರೂ ಬೇಲ್ಸ್ ಅಲ್ಲಾಡಲಿಲ್ಲ! ಒಮ್ಮೆ ಗೊಂದಲದ ಸ್ಥಿತಿ ನಿರ್ಮಾಣವಾಯಿತು. ಆದರೆ ಕೊನೆಗೆ ಬ್ಯಾಟ್ಸ್‌ಮನ್ ಪೆವಿಲಿಯನ್‌ನತ್ತ ಹೆಜ್ಜೆ ಹಾಕಬೇಕಾಯಿತು. ಇಂಥ ಹಲವು ಕುತೂಹಲಕಾರಿ ಘಟನೆಗಳು ಕ್ರಿಕೆಟ್‌ನಲ್ಲಿ ಸಾಮಾನ್ಯ. ಒಂದು ಪಂದ್ಯದಲ್ಲಿ ಎಲ್ಲ 11 ಮಂದಿಯನ್ನೂ ಪಂದ್ಯಶ್ರೇಷ್ಠ ಗೌರವಕ್ಕೆ ಆಯ್ಕೆ ಮಾಡಿದ್ದು ನಿಮಗೆ ಗೊತ್ತೇ?

ತಂಡ ಪರಿಶ್ರಮವನ್ನು ಪರಿಗಣಿಸಿ ಮ್ಯಾಚ್ ರೆಫ್ರಿ, ಶೂನ್ಯಕ್ಕೆ ಔಟ್ ಆದ ಆಟಗಾರನೂ ಸೇರಿದಂತೆ ವಿಜೇತ ತಂಡದ ಎಲ್ಲರನ್ನೂ ಮ್ಯಾನ್ ಆಫ್ ದ ಮ್ಯಾಚ್ ಎಂದು ಘೋಷಿಸಿದ ಅಪರೂಪದ ಪ್ರಕರಣ ಇದು. ಇಂತಹ ಅಪರೂಪದ ನಿದರ್ಶನಕ್ಕೆ ಈಗ 21 ವರ್ಷ ಕಳೆದಿದೆ. 1996ರ ಸೆಪ್ಟೆಂಬರ್ 1 ಇಂಥ ಸ್ವಾರಸ್ಯಕರ ಘಟನೆಗೆ ಸಾಕ್ಷಿಯಾಗಿತ್ತು.

ಟ್ರೆಂಟ್ ಬ್ರಿಡ್ಜ್‌ನಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಈ ಪಂದ್ಯದಲ್ಲಿ ಇಂಗ್ಲೆಂಡ್‌ನ ನಿಕ್ ನೈಟ್ ಜೀವನಶ್ರೇಷ್ಠ 125 ರಗ್ ಗಳಿಸಿದ್ದರು. ಟೆಕ್ಸೆಕೊ ಟ್ರೋಫಿಯ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ನಿಗದಿತ 50 ಓವರ್‌ಗಳಲ್ಲಿ 246 ರನ್ ಗಳಿಸಿತು. ಆರಂಭಿಕನಾಗಿ ಆಗಮಿಸಿದ್ದ ನೈಟ್, ನಾಟೌಟ್ ಬ್ಯಾಟ್ಸ್‌ಮನ್ ಆಗಿ ಮರಳಿದರು. ಏಕದಿನ ಪಂದ್ಯದಲ್ಲಿ ಇಡೀ ಇನಿಂಗ್ಸ್ ಆಡಿದ ವಿಶ್ವದ ಮೂರನೇ ಆಟಗಾರ ಎಂಬ ದಾಖಲೆ ನಿರ್ಮಿಸಿದರೂ, ಪಂದ್ಯಶ್ರೇಷ್ಠ ಗೌರವ ಇವರಿಗೆ ದಕ್ಕಲಿಲ್ಲ.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ತಂಡ ಒಂದು ಹಂತದಲ್ಲಿ 2 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತ್ತು. ಆಗ ಅದ್ಭುತ ಸ್ಪೆಲ್ ನಡೆಸಿದ ಆಡಂ ಹೊಲಿಯಾಕ್ 45 ರನ್‌ಗೆ ನಾಲ್ಕು ವಿಕೆಟ್ ಕಬಳಿಸಿ, ಪ್ರವಾಸಿ ತಂಡದಲ್ಲಿ ನಡುಕ ಹುಟ್ಟಿಸಿದರು. ಅದು ಕೂಡಾ ಶ್ರೇಷ್ಠ ಸಾಧನೆ ಎನಿಸಲಿಲ್ಲ.

ಪಾಕಿಸ್ತಾನ ತಂಡದ ಪರವಾಗಿ ವಾಸಿಂ ಅಕ್ರಂ ಮೂರು ವಿಕೆಟ್ ಪಡೆದರೆ, ಚೊಚ್ಚಲ ಪಂದ್ಯವಾಡಿದ ಶಾಹಿದ್ ನಝೀರ್ ಕೂಡ ಗಮನಾರ್ಹ ಪ್ರದರ್ಶನ ನೀಡಿದರು. ಬ್ಯಾಟಿಂಗ್‌ನಲ್ಲಿ ಸಯೀದ್ ಅನ್ವರ್ ಹಾಗೂ ಇಜಾಝ್ ಅಹ್ಮದ್ ಅರ್ಧಶತಕ ಗಳಿಸಿದರು. ಅಂತಿಮವಾಗಿ ಪಾಕಿಸ್ತಾನ ಎರಡು ಎಸೆತ ಇರುವಂತೆ ಜಯ ಸಾಧಿಸಿತು. ಐದು ಮಂದಿ ಪಾಕಿಸ್ತಾನಿ ಆಟಗಾರರು 29ರಿಂದ 61 ರನ್ ಗಳಿಸಿದ್ದರು. ಆದ್ದರಿಂದ ಪಂದ್ಯಶ್ರೇಷ್ಠರ ಆಯ್ಕೆ ಹೇಗೆ ಎಂಬ ಗೊಂದಲ ಮ್ಯಾಚ್ ರೆಫ್ರಿ ಟಾಮ್ ಗ್ರಾವೆನಿಯವರನ್ನು ಕಾಡಿತು. ಕೊನೆಗೆ ಈ ಜಯ ಇಡೀ ತಂಡದ ಸಂಘಟಿತ ಪ್ರಯತ್ನ ಎಂದು ನಿರ್ಧರಿಸಿದ ತೀರ್ಪುಗಾರರು ವಿಜೇತ ತಂಡದ ಎಲ್ಲ ಹನ್ನೊಂದು ಮಂದಿ ಆಟಗಾರರನ್ನೂ ಪಂದ್ಯಶ್ರೇಷ್ಠರೆಂದು ಘೋಷಿಸಿದರು!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News