ಮದುವೆಯನ್ನು ಅತ್ಯಾಚಾರಕ್ಕೆ ಹೋಲಿಸಿರುವುದಕ್ಕೆ ವಿರೋಧ

Update: 2017-09-02 13:50 GMT

ಬೆಂಗಳೂರು, ಸೆ. 2: ಮದುವೆ ಅತ್ಯಾಚಾರಕ್ಕೆ ಸಮ ಎಂದು ನಿರೂಪಿಸಿ ಕೆಲ ಮಹಿಳಾ ಸಂಘಟನೆಗಳು ದಿಲ್ಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿರುವುದಕ್ಕೆ ಭಾರತೀಯ ಕುಟುಂಬ ಉಳಿಸಿ ಫೌಂಡೇಷನ್ ಹಾಗೂ ಕ್ರಿಸ್ಪ್ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿವೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಟುಂಬ ಉಳಿಸಿ ಫೌಂಡೇಷನ್‌ನ ಸ್ಥಾಪಕ ಅನಿಲ್ ಕುಮಾರ್, ಈ ಮೊಕದ್ದಮೆಯಲ್ಲಿ ಮದುವೆಯ ಒಳಗೆ ಯಾವುದೇ ಲೈಂಗಿಕ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಲಂ 375 ಅಡಿಯಲ್ಲಿ ನೀಡಿರುವ ವಿನಾಯಿತಿಯನ್ನು ತೆಗೆದು ಹಾಕುವಂತೆ ಬೇಡಿಕೆ ಸಲ್ಲಿಸಿರುವುದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.

ಪತಿಯಿಂದ ಹೆಂಡತಿಗಾಗುವ ಹಿಂಸೆಯನ್ನು ಅತ್ಯಾಚಾರ ಎಂದು ಪರಿಗಣಿಸುವುದು ಅಸಂಬದ್ಧವಾಗಿದೆ. ಮದುವೆಯಲ್ಲಿ ಲೈಂಗಿಕ ಹಿಂಸಾಚಾರವಿರಬಹುದು. ಆದರೆ, ಅದನ್ನು ಅತ್ಯಾಚಾರ ಎಂದು ಕರೆಯಲು ಸಾಧ್ಯವಿಲ್ಲ. ಪುರುಷರು ಮಾತ್ರ ಅತ್ಯಾಚಾರ ಮಾಡುತ್ತಿಲ್ಲ. ಹಲವು ಕಡೆಗಳಲ್ಲಿ ಮಹಿಳೆಯರು ಪುರುಷರ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಆದರೆ, ನಮ್ಮ ನ್ಯಾಯ ವ್ಯವಸ್ಥೆ ಒಂದು ಕಡೆ ಮಾತ್ರ ಕೆಲಸ ಮಾಡುತ್ತಿದೆ ಎಂದು ವಿಷಾದಿಸಿದರು.

ಸುದೀಪ ದೇಶಪಾಂಡೆ ಮಾತನಾಡಿ, ವೈವಾಹಿಕ ಅತ್ಯಾಚಾರ ಕಾನೂನು ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಹೀಗಾಗಲೆ ಪುರುಷರ ಮೇಲೆ ಅವರ ಪತ್ನಿಯರು ವೈವಾಹಿಕ ಅತ್ಯಾಚಾರದ ಸುಳ್ಳು ಪ್ರಕರಣ ದಾಖಲಿಸಿ ಪುರುಷನ ಜೀವನವನ್ನು ಹಾಳು ಮಾಡುತ್ತಿದ್ದಾರೆ. ಆ ವ್ಯಕ್ತಿಗೆ ಉದ್ಯೋಗ ದೊರೆಯದೆ, ಸಮಾಜದಲ್ಲಿ ಮರ್ಯಾದೆ ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.

 ಪುರುಷರ ಪರವಾಗಿ ಯಾವುದೇ ಕಾನೂನುಗಳಿಲ್ಲ. ಮಹಿಳೆಯರು ದೂರು ನೀಡಿದ ತಕ್ಷಣ ಪುರುಷರ ಮೇಲೆ ಪ್ರಕರಣ ದಾಖಲಿಸುತ್ತಾರೆ. ಶೇ.75ರಷ್ಟು ಪ್ರಕರಣಗಳು ಸುಳ್ಳು ಪ್ರಕರಣಗಳಾಗಿವೆ. ಈ ಒಂದು ವೈವಾಹಿಕ ಅತ್ಯಾಚಾರ ಕಾನೂನು ಕುರಿತು ಜನ ಸಾಮಾನ್ಯರಲ್ಲಿ ಚರ್ಚೆಗಳು ಆಗಬೇಕಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಅನುಪಮ್, ನೀರಜ್ ಶಾಂತಕುಮಾರ್, ಕುಮಾರ್ ಜಾರ್ಗೀದಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News