2020 ರ ಒಲಿಂಪಿಕ್‌ನಲ್ಲಿ ಆರೋಹಣ ಅಧಿಕೃತ ಕ್ರೀಡೆ
Update: 2017-09-02 20:25 IST
ಬೆಂಗಳೂರು, ಸೆ. 2: 2020ರ ಒಲಿಂಪಿಕ್ಸ್‌ನಲ್ಲಿ ಆರೋಹಣ ಕ್ರೀಡೆಯು ಅಧಿಕೃತ ಕ್ರೀಡೆಯಾಗಿ ಸ್ಥಾನಪಡೆದಿದ್ದು, ಈ ಹಿನ್ನೆಲೆಯಲ್ಲಿ ಯುವ ಕ್ರೀಡಾಪಟುಗಳನ್ನು ತಯಾರು ಮಾಡಲು ಬೌಲ್ಡರಿಂಗ್ ಚಾಂಪಿಯನ್‌ಶಿಪ್ ಏರ್ಪಡಿಸಲಾಗುತ್ತಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಿರ್ದೇಶಕ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.
ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಾಗೂ ಭಾರತೀಯ ಪರ್ವತಾರೋಹಣ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಬೆಂಗಳೂರು ಬೌಲ್ಡರಿಂಗ್ ಚಾಂಪಿಯನ್‌ಶಿಫ್-2017 ಅನ್ನು ಉದ್ಫಾಟಿಸಿ ಅವರು ಮಾತನಾಡಿದರು.
ಭವಿಷ್ಯದ ಉತ್ತಮ ಕ್ರೀಡಾಪಟುಗಳಿಗೆ ಸ್ಪೂರ್ತಿ ನೀಡುವ ಆಶಯದೊಂದಿಗೆ ಈ ಕ್ರೀಡಾಕೂಟವನ್ನು ಸಂಘಟಿಸಲಾಗುತ್ತಿದೆ. ಸುಮಾರು 12 ದೇಶಿ ಕ್ರೀಡಾಪಟುಗಳು ಸೇರಿದಂತೆ ದೇಶದ ಅತ್ಯುತ್ತಮ ಆರೋಹಣ ಕ್ರೀಡಾಪಟುಗಳು ಒಂದೇ ವೇದಿಕೆಯಡಿಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಅವರು ತಿಳಿಸಿದರು.