ಫಿಫಾ ವಿಶ್ವಕಪ್‌ಗೆ ಮೆಕ್ಸಿಕೊ ಅರ್ಹತೆ: ಐತಿಹಾಸಿಕ ಸಾಧನೆಯತ್ತ ಸಿರಿಯಾ

Update: 2017-09-02 18:37 GMT

ಮೆಕ್ಸಿಕೊ ಸಿಟಿ, ಸೆ.2: ಪನಾಮಾ ತಂಡದ ವಿರುದ್ಧ 1-0 ಅಂತರದಿಂದ ಜಯ ಸಾಧಿಸಿರುವ ಮೆಕ್ಸಿಕೊ ತಂಡ ರಶ್ಯದಲ್ಲಿ 2018ರಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಮೆಕ್ಸಿಕೊ ತಂಡ ವಿಶ್ವಕಪ್‌ಗೆ ಅರ್ಹತೆ ಪಡೆದ ಉತ್ತರ, ಮಧ್ಯ ಅಮೆರಿಕ ಹಾಗೂ ಕೆರಿಬಿಯನ್ ಫುಟ್ಬಾಲ್ ಸಂಸ್ಥೆಗಳ ಆಡಳಿತ ಮಂಡಳಿು(ಕೊಂಕಾಕಾಫ್)ಮೊದಲ ತಂಡವಾಗಿದೆ.

ಬದಲಿ ಆಟಗಾರ ಹಿರ್ವಿಂಗ್ ಲೊಝಾನೊ 51ನೆ ನಿಮಿಷದಲ್ಲಿ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ಮೆಕ್ಸಿಕೊ ತಂಡ ಪನಾಮ ವಿರುದ್ಧ ಗೆಲುವು ದಾಖಲಿಸಿತು. ಆರು ತಂಡಗಳಿರುವ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿರುವ ಮೆಕ್ಸಿಕೊ ಒಟ್ಟು 17 ಅಂಕ ಪಡೆದಿದೆ. ಇನ್ನೂ ಮೂರು ಪಂದ್ಯಗಳು ಆಡಲು ಬಾಕಿ ಉಳಿದಿದೆ. ಮೆಕ್ಸಿಕೊ ಎರಡನೆ ಸ್ಥಾನದಲ್ಲಿರುವ ಕೊಸ್ಟಾರಿಕೊ ತಂಡಕ್ಕಿಂತ ಮೂರು ಅಂಕ,ಅಮೆರಿಕ ಹಾಗೂ ಹೊಂಡುರಾಸ್ ತಂಡಗಳಿಗಿಂತ 9 ಅಂಕ ಮುನ್ನಡೆಯಲ್ಲಿದೆ. ಮೆಕ್ಸಿಕೊ ಸತತ ಏಳನೆ ಹಾಗೂ ಒಟ್ಟಾರೆ 16ನೆ ಬಾರಿ ವಿಶ್ವಕಪ್‌ಗೆ ಅರ್ಹತೆ ಪಡೆದಿದೆ. ಬ್ರೆಝಿಲ್, ಜರ್ಮನಿ, ಇಟಲಿ ಹಾಗೂ ಅರ್ಜೆಂಟೀನ ಬಳಿಕ ಅತ್ಯಂತ ಹೆಚ್ಚು ಬಾರಿ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿರುವ ತಂಡವಾಗಿದೆ.

<ಸಿರಿಯಾಕ್ಕೆ ವಿಶ್ವಕಪ್ ಅರ್ಹತೆಯ ವಿಶ್ವಾಸ

 ಹಾಂಕಾಂಗ್, : ಆರು ವರ್ಷಕ್ಕೂ ಅಧಿಕ ಸಮಯ ಆಂತರಿಕ ಯುದ್ಧ ಹಾಗೂ ಆಂತರಿಕ ರಾಜಕೀಯ ಭಿನ್ನಾಭಿಪ್ರಾಯದಿಂದ ಹೊರಬಂದಿರುವ ಸಿರಿಯಾ ದೇಶದ ಫುಟ್ಬಾಲ್ ಆಟಗಾರರು ಮೊತ್ತ ಮೊದಲ ಬಾರಿ ಫಿಫಾ ವಿಶ್ವಕಪ್‌ನಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳು ಅದಮ್ಯ ವಿಶ್ವಾಸದಲ್ಲಿದ್ದಾರೆ.

ಭದ್ರತೆಯ ದೃಷ್ಟಿಯಿಂದ ಸ್ವದೇಶದ ಪಂದ್ಯಗಳನ್ನು ವಿದೇಶಿ ನೆಲದಲ್ಲಿ ಆಡುತ್ತಿರುವ ಸಿರಿಯಾ ಏಷ್ಯಾ ದೇಶಗಳ ವಿಶ್ವಕಪ್ ಅರ್ಹತಾ ಪಂದ್ಯದ ‘ಎ’ ಗುಂಪಿನಲ್ಲಿ ಇರಾನ್ ಹಾಗೂ ದಕ್ಷಿಣ ಕೊರಿಯಾದ ಬಳಿಕ 3ನೆ ಸ್ಥಾನದಲಿ್ಲದೆ.

ಮಂಗಳವಾರ ಟೆಹ್ರಾನ್‌ನಲ್ಲಿ ನಡೆಯಲಿರುವ ಇರಾನ್ ವಿರುದ್ಧದ ಪಂದ್ಯವನ್ನು ಸಿರಿಯಾ ಗೆದ್ದುಕೊಂಡರೆ, ದಕ್ಷಿಣ ಕೊರಿಯಾ ತಂಡ ಉಝ್ಬೇಕಿಸ್ತಾನದ ವಿರುದ್ಧ ಶರಣಾದರೆ, ಸಿರಿಯಾ ತಂಡ ಅಂಕಪಟ್ಟಿಯಲ್ಲಿ 2ನೆ ಸ್ಥಾನಕ್ಕೇರುವ ಮೂಲಕ ಮುಂದಿನ ವರ್ಷ ರಶ್ಯದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ನೇರ ಪ್ರವೇಶ ಪಡೆಯಲಿದೆ.

ಒಂದು ವೇಳೆ ಈ ಫಲಿತಾಂಶ ಸಿರಿಯಾ ಪರವಾಗಿರದಿದ್ದರೆ ಮೂರನೆ ಸ್ಥಾನದಲ್ಲಿ ಉಳಿಯುತ್ತದೆ. ಎರಡು ಸುತ್ತಿನ ಪ್ಲೇ-ಆಫ್‌ನ ಮೂಲಕ ಅರ್ಹತೆ ಪಡೆಯುವ ಅವಕಾಶ ಪಡೆಯಲಿದೆ.

  ಮಲೇಷ್ಯಾದಲ್ಲಿ ಗುರುವಾರ ನಡೆದಿದ್ದ ಪಂದ್ಯದಲ್ಲಿ ಕತರ್ ತಂಡವನ್ನು 3-1 ಅಂತರದಿಂದ ಮಣಿಸಿರುವ ಸಿರಿಯಾ 2022ರ ವಿಶ್ವಕಪ್‌ನ ಆತಿಥ್ಯವಹಿಸಿರುವ ಕತರ್‌ನ್ನು ಟೂರ್ನಿಯ ಅರ್ಹತಾ ಸ್ಪರ್ಧೆಯಿಂದ ಹೊರದಬ್ಬಿದೆ.

ಸಿರಿಯಾಕ್ಕೆ ಇರಾನ್ ವಿರುದ್ಧ ಕಠಿಣ ಸವಾಲು ಎದುರಾಗಿದ್ದು, ಇರಾನ್ ಅರ್ಹತಾ ಸುತ್ತಿನಲ್ಲಿ ಎದುರಾಳಿಗೆ ಇನ್ನೂ ಗೋಲು ಬಿಟ್ಟುಕೊಟ್ಟಿಲ್ಲ. ಇರಾನ್ 2018ರ ಜೂನ್‌ನಲ್ಲಿ ರಶ್ಯದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News