ವೀನಸ್, ಶರಪೋವಾ ನಾಲ್ಕನೆ ಸುತ್ತಿಗೆ ಲಗ್ಗೆ

Update: 2017-09-02 18:51 GMT

ನ್ಯೂಯಾರ್ಕ್, ಸೆ.2: ಅಮೆರಿಕದ ಹಿರಿಯ ಆಟಗಾರ್ತಿ ವೀನಸ್ ವಿಲಿಯಮ್ಸ್ ಹಾಗೂ ರಶ್ಯದ ಆಟಗಾರ್ತಿ ಮರಿಯಾ ಶರಪೋವಾ ಯುಎಸ್ ಓಪನ್‌ನಲ್ಲಿ ನಾಲ್ಕನೆ ಸುತ್ತಿಗೆ ಪ್ರವೇಶಿಸಿದ್ದಾರೆ.

ವೀನಸ್ ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಗ್ರೀಕ್ ಆಟಗಾರ್ತಿ ಮರಿಯಾ ಸಕ್ಕಾರಿ ವಿರುದ್ಧ 6-3, 6-4 ನೇರ ಸೆಟ್‌ಗಳಿಂದ ಜಯ ಸಾಧಿಸಿದರು.

2000 ಹಾಗೂ 2001ರಲ್ಲಿ ಯುಎಸ್ ಓಪನ್ ಚಾಂಪಿಯನ್ ಆಗಿರುವ ವೀನಸ್ ಮುಂದಿನ ಸುತ್ತಿನಲ್ಲಿ ಸ್ಪೇನ್‌ನ ಕಾರ್ಲ ಸುಯರೆಝ್ ನವ್ರಾರೊರನ್ನು ಎದುರಿಸಲಿದ್ದಾರೆ. ವೀನಸ್ ಈ ವರ್ಷ ಆಡಿರುವ ಎಲ್ಲ 4 ಗ್ರಾನ್‌ಸ್ಲಾಮ್ ಟೂರ್ನಿಗಳಲ್ಲಿ ಅಂತಿಮ-16 ಸುತ್ತಿಗೆ ತಲುಪಿದ ಸಾಧನೆ ಮಾಡಿದರು. ಈ ಹಿಂದೆ 2010ರಲ್ಲಿ ಈ ಸಾಧನೆ ಮಾಡಿದ್ದರು.

ಮತ್ತೊಂದು ಪಂದ್ಯದಲ್ಲಿ ಅಮೆರಿಕದ ಯುವ ಆಟಗಾರ್ತಿ ಸೋಫಿಯಾ ಕೆನಿನ್‌ರನ್ನು 7-5, 6-2 ಸೆಟ್‌ಗಳಿಂದ ಮಣಿಸಿರುವ ವಿಶ್ವದ ಮಾಜಿ ನಂ.1 ಆಟಗಾರ್ತಿ ಶರಪೋವಾ ಪ್ರಿ-ಕ್ವಾರ್ಟರ್‌ಫೈನಲ್‌ಗೆ ತಲುಪಿದ್ದಾರೆ.

 15 ತಿಂಗಳ ನಿಷೇಧ ಪೂರೈಸಿ ಟೆನಿಸ್‌ಗೆ ವಾಪಸಾದ ಬಳಿಕ ಮೊದಲ ಬಾರಿ ವೈಲ್ಡ್‌ಕಾರ್ಡ್ ಮೂಲಕ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಭಾಗವಹಿಸಿದ ಶರಪೋವಾ ನಾಲ್ಕನೆ ಸುತ್ತಿನಲ್ಲಿ ಲಾಟ್ವಿಯದ ಅನಸ್ಟಸಿಜಾ ಸೆವಾಸ್ಟೋವಾರನ್ನು ಎದುರಿಸಲಿದ್ದಾರೆ.

ಐದು ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿರುವ ಶರಪೋವಾ 14ನೆ ಬಾರಿ ಅಂತಿಮ-16ರ ಸುತ್ತು ಪ್ರವೇಶಿಸಿದ್ದಾರೆ.

                                                 ಶಪೊವಾಲೊವ್ ನಾಲ್ಕನೆ ರೌಂಡ್‌ಗೆ

 ಕೆನಡಾದ ಯುವ ಆಟಗಾರ ಡೆನಿಸ್ ಶಪೊವಾಲೊವ್ ಪುರುಷರ ಸಿಂಗಲ್ಸ್‌ನಲ್ಲಿ ನಾಲ್ಕನೆ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಶಪೊವಾಲೊವ್ ಎದುರಾಳಿ ಬ್ರಿಟನ್‌ನ ಕೈಲ್ ಎಡ್ಮಂಡ್ 3-6, 6-3, 6-3, 1-0 ಹಿನ್ನಡೆಯಲ್ಲಿದಾಗ ಗಾಯಗೊಂಡು ನಿವೃತ್ತಿಯಾದರು. 18ರ ಹರೆಯದ ಡೆನಿಸ್ 1989ರ ಬಳಿಕ ಯುಎಸ್ ಓಪನ್‌ನಲ್ಲಿ ನಾಲ್ಕನೆ ಸುತ್ತಿಗೇರಿದ ಕಿರಿಯ ಆಟಗಾರ ಎನಿಸಿಕೊಂಡರು. 1989ರಲ್ಲಿ ಅಮೆರಿಕದ ಮೈಕಲ್ ಚಾಂಗ್ ಈ ಸಾಧನೆ ಮಾಡಿದ್ದರು.

          

                                                      ಪೇಸ್, ರಾಜಾ ದ್ವಿತೀಯ ಸುತ್ತಿಗೆ ಪ್ರವೇಶ

                                                     

 ನ್ಯೂಯಾರ್ಕ್, ಸೆ.2: ಭಾರತದ ಲಿಯಾಂಡರ್ ಪೇಸ್ ಹಾಗೂ ಪೂರವ್ ರಾಜಾ ಯುಎಸ್ ಓಪನ್‌ನ ಪುರುಷರ ಡಬಲ್ಸ್ ವಿಭಾಗದಲ್ಲಿ ಶುಭಾರಂಭ ಮಾಡಿದ್ದಾರೆ. ಆದರೆ, ಸಾನಿಯಾ ಮಿರ್ಝಾ ಹಾಗೂ ರೋಹನ್ ಬೋಪಣ್ಣ ಮೊದಲ ಸುತ್ತಿನಲ್ಲೇ ಮುಗ್ಗರಿಸಿದ್ದಾರೆ.

ಹಿರಿಯ ಆಟಗಾರ ಪೇಸ್ ಹಾಗೂ ರಾಜಾ ಮೊದಲ ಸುತ್ತಿನ ಪಂದ್ಯದಲ್ಲಿ ಸರ್ಬಿಯದ ಜಾಂಕೊ ಟಿಪ್ಸೆರ್ವಿಕ್ ಹಾಗೂ ವಿಕ್ಟರ್ ಟ್ರೊಸ್ಕಿ ವಿರುದ್ಧ 6-1, 6-3 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು.

ಪೇಸ್-ರಾಜಾ ಜೋಡಿ ಮುಂದಿನ ಸುತ್ತಿನಲ್ಲಿ ರಶ್ಯದ ಕರೆನ್ ಖಚನೊವ್ ಹಾಗೂ ಆ್ಯಂಡ್ರೆ ರುಬ್ಲೆವ್‌ರನ್ನು ಎದುರಿಸಲಿದ್ದಾರೆ.

ಒಂದು ಗಂಟೆ, 47 ನಿಮಿಷಗಳ ಕಾಲ ನಡೆದ ಪುರುಷರ ಡಬಲ್ಸ್‌ನ 2ನೆ ಸುತ್ತಿನ ಪಂದ್ಯದಲ್ಲಿ 10ನೆ ಶ್ರೇಯಾಂಕದ ಬೋಪಣ್ಣ ಹಾಗೂ ಉರುಗ್ವೆಯ ಪಾಬ್ಲೊ ಕ್ಯುವಾಸ್ ಮಾಜಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಫ್ಯಾಬಿಯೊ ಫೊಗ್ನಿನಿ ಹಾಗೂ ಸಿಮೊನ್ ಬೊಲೆಲ್ಲಿ ವಿರುದ್ಧ 5-7, 6-4, 6-4 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.

ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ಹಾಗೂ ಕ್ರೊಯೇಷಿಯದ ಇವಾನ್ ಡೊಡಿಗ್ ಲಾಟ್ವಿಯ-ಫ್ರೆಂಚ್ ಜೋಡಿ ಜೆಲೆನಾ ಒಸ್ಟಾಪೆಂಕೊ ಹಾಗೂ ಫ್ಯಾಬ್ರೈಸ್ ಮಾರ್ಟಿನ್ ವಿರುದ್ಧ 7-5, 3-6, 6-10 ಅಂತರದಿಂದ ಸೋತಿದ್ದಾರೆ.

ಬೋಪಣ್ಣ ಹಾಗೂ ಸಾನಿಯಾ ಟೂರ್ನಮೆಂಟ್‌ನಲ್ಲಿ ಇನ್ನೂ ಸ್ಪರ್ಧೆಯಲ್ಲಿದ್ದಾರೆ. ಬೋಪಣ್ಣ ಕೆನಡಾದ ಗ್ಯಾಬ್ರಿಯೆಲಾ ಡೊಬ್ರೊಸ್ಕಿ ಅವರೊಂದಿಗೆ ಮೊದಲ ಸುತ್ತಿನ ಮಿಶ್ರ ಡಬಲ್ಸ್ ಪಂದ್ಯವನ್ನಾಡಲಿದ್ದಾರೆ. ಸಾನಿಯಾ ತನ್ನ ಚೀನಾದ ಜೊತೆಗಾರ್ತಿ ಪೆಂಗ್ ಶುಯಿ ಅವರೊಂದಿಗೆ ಮಹಿಳೆಯರ ಡಬಲ್ಸ್ ಪಂದ್ಯವನ್ನಾಡಲಿದ್ದಾರೆ.

ಆ್ಯಂಡ್ರೆ ಬೆಂಜಮನ್‌ರೊಂದಿಗೆ ಆಡಿದ ಡಿವಿಜ್ ಶರಣ್ ಸ್ಪೇನ್‌ನ ಫೆಲಿಸಿಯಾನೊ ಲೊಪೆಝ್ ಹಾಗೂ ಮಾರ್ಕ್ ಲೊಪೆಝ್ ವಿರುದ್ಧ 4-6, 4-6 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News