ಅಡಿಗರು ಕವಿತೆ ರಚಿಸಿ ಹೊಸ ಜನಾಂಗದ ಕಣ್ಣು ತೆರಿಸಿದರು: ಡಾ.ಎನ್.ಎಸ್.ಲಕ್ಷ್ಮಿನಾರಾಯಣಭಟ್ಟ
ಬೆಂಗಳೂರು, ಜು.3: ಹೊಸ ಕವಿತೆಗಳನ್ನು ರಚಿಸುವ ಮೂಲಕ ಹೊಸ ಜನಾಂಗದ ಕಣ್ಣು ತೆರೆಸಿದವರು ನವ್ಯ ಕವಿ ಎಂ.ಗೋಪಾಲಕೃಷ್ಣ ಅಡಿಗರು ಎಂದು ಹಿರಿಯ ಕವಿ ಡಾ.ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಯನ ಸಭಾಂಗಣದಲ್ಲಿ ಹೊಂಬಾಳೆ ಪ್ರತಿಭಾರಂಗ ಆಯೋಜಿಸಿದ್ದ ಕವಿ ದನಿ ಎಂ.ಗೋಪಾಲಕೃಷ್ಣ ಅಡಿಗ ಕವಿತೆಗಳ ಓದು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಡಿಗರ ಕವಿತೆಗಳು ಇಂದಿನ ಹಾಗೂ ಮುಂದಿನ ಹೊಸ ಜನಾಂಗದ ಕಣ್ಣು ತೆರಿಸುವಂತವು. ಆದರೆ, ಇಂದಿನ ಜನಾಂಗದಲ್ಲಿ ಓದುವ ಹವ್ಯಾಸ ಕಡಿಮೆಯಾಗಿದೆ. ಈ ಸಮಸ್ಯೆ ಬಗೆ ಹರಿಯಬೇಕಾದರೆ ಓದುವ ಹವ್ಯಾಸ ಹೆಚ್ಚಾಗಬೇಕೆಂದು ಅಭಿಪ್ರಾಯಿಸಿದರು.
ಸಾಹಿತ್ಯ ಕ್ಷೇತ್ರದಲ್ಲಿ ಕುವೆಂಪು, ದ.ರಾ.ಬೇಂದ್ರೆ, ಗಳಗನಾಥ, ಬಿ.ಎಂ.ಶ್ರೀಕಂಠಯ್ಯ ಅವರ ಸಾಲಿಗೆ ಸೇರುವ ಕವಿ ಎಂ.ಗೋಪಾಲಕೃಷ್ಣ ಅಡಿಗ ಅವರು ಭಾವತರಂಗ, ನಡೆದು ಬಂದ ದಾರಿ, ಚಂಡೆಮದ್ದಳೆ, ಭೂಮಿಗೀತ, ವರ್ಧಮಾನ, ಚಿಂತಾಮಣಿಯಲ್ಲಿ ಕಂಡ ಮುಖ ಸೇರಿ ಇನ್ನಿತರ ಪ್ರಸಿದ್ಧ ಕಾವ್ಯಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದು ಅವರು, ತಮ್ಮದೆ ಶೈಲಿಯಲ್ಲಿ ನೂತನ ಕವಿತೆಗಳನ್ನು ರಚಿಸುತ್ತಿದ್ದ ಅಡಿಗರು ನವ್ಯ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಕತೆಗಾರ, ವಿಮರ್ಶಕ ಎಸ್.ದಿವಾಕರ ಮಾತನಾಡಿ, ದೇಶದಲ್ಲಿ ಅರಾಜಕತೆ ಹೇಗೆ ಉಂಟಾಗುತ್ತದೆ ಎಂಬುದರ ಬಗ್ಗೆ ಅಡಿಗರು ತಾವು ರಚಿಸಿದ ಕವನದಲ್ಲಿ ತಿಳಿಸಿದ್ದು, ಇವರ ಕವನಗಳನ್ನು ಪ್ರತಿಯೊಬ್ಬರೂ ಓದುವ ಅವಶ್ಯಕತೆ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಮರ್ಶಕಿ ಡಾ.ಡಿ.ಮಂಗಳಾ ಪ್ರಿಯದರ್ಶಿನಿ, ಗೋಪಾಲಕೃಷ್ಣ ಅವರ ಪುತ್ರ ಡಾ.ಎಂ.ಜಿ.ಪ್ರದ್ಯುಮ್ನ ಉಪಸ್ಥಿತರಿದ್ದರು.