ಬ್ಯಾರಿಕೇಡ್‌ಗೆ ಕಾರು ಢಿಕ್ಕಿ: ಯುವಕ ಮೃತ್ಯು
Update: 2017-09-03 18:34 IST
ಬೆಂಗಳೂರು, ಸೆ.3: ವೇಗವಾಗಿ ಚಲಿಸುತ್ತಿದ್ದ ಕಾರು ರಸ್ತೆ ವಿಭಜಕದ ಬ್ಯಾರಿಕೇಡ್‌ಗೆ ಢಿಕ್ಕಿ ಹೊಡೆದು ಪಲ್ಟಿಯಾಗಿ ಓರ್ವ ಮೃತಪಟ್ಟರೆ ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆ ಕೊಡಿಗೆಹಳ್ಳಿಯ ಸರ್ವಿಸ್ ರಸ್ತೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಮೃತನನ್ನು ಕೊಡಿಗೇಹಳ್ಳಿಯ ನಿವಾಸಿ ವಸಂತ್‌ಕುಮಾರ್(25) ಎಂದು ಗುರುತಿಸಲಾಗಿದೆ. ತಲೆಗೆ ಗಾಯಗೊಂಡಿರುವ ಗಂಗೇನಹಳ್ಳಿಯ ಭರತ್‌ಕುಮಾರ್(24) ನಗರದ ಖಾಸಗಿ ಆ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ರಾತ್ರಿ 11ರ ವೇಳೆ ಕಾರಿನಲ್ಲಿ ಇವರಿಬ್ಬರು ವೇಗವಾಗಿ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಕೊಡಿಗೆಹಳ್ಳಿಯ ಸರ್ವಿಸ್ ರಸ್ತೆಯ ಮದರ್ ಹುಡ್ ಆಸ್ಪತ್ರೆಯ ಬಳಿ ರಸ್ತೆ ವಿಭಜಕದ ಬ್ಯಾರಿಕೇಡ್‌ಗೆ ಢಿಕ್ಕಿ ಹೊಡೆದು ಕಾರು ಪಲ್ಟಿಯಾಗಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಹೆಬ್ಬಾಳ ಸಂಚಾರ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ.