×
Ad

ಕೇಂದ್ರ ಮಂತ್ರಿ ಮಂಡಲ ವಿಸ್ತರಣೆ: ರಾಜ್ಯದ ನಿರೀಕ್ಷೆ ಹುಸಿ; ಡಾ.ಜಿ.ಪರಮೇಶ್ವರ್

Update: 2017-09-03 18:46 IST

ಬೆಂಗಳೂರು, ಸೆ.3: ಕೇಂದ್ರ ಮಂತ್ರಿ ಮಂಡಲ ವಿಸ್ತರಣೆ ಸಂದರ್ಭದಲ್ಲಿ ರಾಜ್ಯಕ್ಕೆ ಎರಡು ಸಚಿವ ಸ್ಥಾನ ಸಿಗುತ್ತವೆ ಎಂಬ ನಿರೀಕ್ಷೆಯು ಹುಸಿಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ರವಿವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಸಂಸದರಾದ ಶೋಭಾ ಕರಂದ್ಲಾಜೆ, ಪ್ರಹ್ಲಾದ್‌ಜೋಶಿ ಕೇಂದ್ರ ಸಚಿವರಾಗುತ್ತಾರೆ ಅನ್ನೋ ನಿರೀಕ್ಷೆ ಹುಸಿಯಾಗಿದೆ ಎಂದರು.

ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾಗಿರುವ ಉತ್ತರ ಕನ್ನಡ ಜಿಲ್ಲೆಯ ಅನಂತಕುಮಾರ್ ಹೆಗಡೆ ರಾಜ್ಯದ ಪರವಾಗಿ ಕೆಲಸ ಮಾಡಲಿ. ಸೀ ಬರ್ಡ್ ನೌಕಾ ನೆಲೆಯ ಸಂತ್ರಸ್ತರಿಗೆ ಇನ್ನು ಪರಿಹಾರ ಸಿಕ್ಕಿಲ್ಲ. ಈಗಲಾದರೂ ತಮ್ಮ ಸಚಿವ ಸ್ಥಾನದ ಪ್ರಭಾವ ಬಳಸಿ ಸಂತ್ರಸ್ತರಿಗೆ ಪರಿಹಾರ ಕೊಡಿಸಲಿ ಎಂದು ಪರಮೇಶ್ವರ್ ಸಲಹೆ ನೀಡಿದರು.

ರೈಲ್ವೆಯಂತಹ ಮಹತ್ವದ ಖಾತೆಗೆ ಕಳೆದ ಮೂರು ವರ್ಷಗಳಲ್ಲಿ ಮೂವರು ಸಚಿವರನ್ನು ನೇಮಕ ಮಾಡಲಾಗಿದೆ. ಮುಖ್ಯಮಂತ್ರಿಯಾಗಿದ್ದ ಸದಾನಂದಗೌಡರನ್ನ ರೈಲ್ವೆ ಸಚಿವರನ್ನಾಗಿ ಮಾಡಿ, ಆನಂತರ ಬೇರೆ ಖಾತೆಗೆ ವರ್ಗಾಯಿಸಿದರು. ಅವರು ಅಷ್ಟೊಂದು ಅಸಮರ್ಥರೆ ಎಂದು ಪ್ರಶ್ನಿಸಿದ ಪರಮೇಶ್ವರ್, ಇದು ಸದಾನಂದಗೌಡರಿಗೆ ಮಾಡಿದ ಅವಮಾನ ಎಂದು ಆರೋಪಿಸಿದರು.

ನರೇಂದ್ರಮೋದಿ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ಸರಿಯಾಗಿ ನಡೆದಿಲ್ಲ. ಸುರೇಶ್‌ಪ್ರಭು ಒಳ್ಳೆ ಕೆಲಸಗಾರ. ಈಗ ಅವರನ್ನು ಬದಲಿಸಿ ಪಿಯೂಷ್ ಗೋಯಲ್‌ಗೆ ರೈಲ್ವೆ ಇಲಾಖೆಯ ಜವಾಬ್ದಾರಿ ನೀಡಿದ್ದಾರೆ. ಇದು ಕೇಂದ್ರ ಸರಕಾರ ಎತ್ತ ಕೆಲಸ ಮಾಡುತ್ತಿದೆ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ಪರಮೇಶ್ವರ್ ಹೇಳಿದರು.

ಗರಿಷ್ಠ ಮುಖಬೆಲೆಯ ನೋಟುಗಳ ಅಮಾನ್ಯೀಕರಣದಿಂದಾಗಿ ದೇಶದ ಜಿಡಿಪಿ ದರ ಕುಸಿದಿದೆ. ಕೇಂದ್ರ ಸರಕಾರ ಇನ್ನಾದರೂ ತನ್ನ ಕಾರ್ಯಶೈಲಿಯನ್ನು ಬದಲಾಯಿಸಿಕೊಂಡು ಉತ್ತಮವಾಗಿ ಕೆಲಸ ಮಾಡುವತ್ತ ಗಮನ ಹರಿಸಲಿ ಎಂದು ಅವರು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News