ಜಾಗಕ್ಕೆ ಅಕ್ರಮ ಟಿಡಿಆರ್: ಓರ್ವ ಬಂಧನ
ಬೆಂಗಳೂರು, ಸೆ.3: ಬೆಂಗಳೂರು ಪೂರ್ವ ತಾಲೂಕು ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಬಸವನಪುರ ಗ್ರಾಮದ ಸರ್ವೇ ನಂ. 26/3 ಮತ್ತು 26/2ಕ್ಕೆ ಜಾಗಕ್ಕೆ ಸಂಬಂಧಿಸಿದಂತೆ ಅಕ್ರಮವಾಗಿ ಟಿಡಿಆರ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಎಂಟಿಎಫ್ ಪೊಲೀಸರು, ಗೋಪಿ ಎಂಬಾತನನ್ನು ಬಂಧಿಸಿದ್ದಾರೆ.
ಟಿಡಿಆರ್ ನೀಡಲು ಸಹಕರಿಸಿದ ಬಿಬಿಎಂಪಿ ಇಂಜಿನಿಯರ್ ದೇವರಾಜ್ ಅವರ ಪತ್ತೆಗೆ ಬಿಎಂಟಿಎಫ್ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಕೆ.ಆರ್. ಪುರಂ ಕ್ಷೇತ್ರದ ಬಸವನಪುರ ಗ್ರಾಮದಲ್ಲಿನ ಎರಡು ಸರ್ವೇ ನಂಬರ್‌ಗಳಿಗೆ ಸಂಬಂಧಿಸಿದಂತೆ, ಕೆ. ಮುನಿರಾಜು, ಬಂಧಿತ ಗೋಪಿ, ಅವಿನಾಶ್ ಮತ್ತು ಬಿ. ಗಜೇಂದ್ರ ಅವರು, ಪಾಲಿಕೆ ಇಂಜಿನಿಯರ್ ದೇವರಾಜ್ ಅವರನ್ನು ಸಂಪರ್ಕಿಸಿ ಟಿಡಿಆರ್ ಅನ್ನು ಅಕ್ರಮವಾಗಿ ಪಡೆಯುವ ಮೂಲಕ ಬಿಬಿಎಂಪಿ ಬೊಕ್ಕಸಕ್ಕೆ ನಷ್ಟವುಂಟು ಮಾಡಿದ್ದರು.
ಬಿಬಿಎಂಪಿ ವ್ಯಾಪ್ತಿಯ ರಸ್ತೆ ಅಗಲೀಕರಣ ಯೋಜನೆ ಅಡಿಯಲ್ಲಿ ಟಿಡಿಆರ್ ಮತ್ತು ಡಿಆರ್‌ಸಿ ಅನ್ನು ಪಡೆದುಕೊಂಡಿದ್ದರು. ಈ ಸಂಬಂಧ ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್. ರಮೇಶ್ ಅವರು ಬಿಎಂಟಿಎಫ್‌ಗೆ ಲಿಖಿತ ಮೂಲಕ ದೂರು ಸಲ್ಲಿಸಿ, ಅಕ್ರಮ ಟಿಡಿಆರ್ ಅನ್ನು ರದ್ದುಪಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಪಡಿಸಿದರು.
ಈ ದೂರಿನ ಅನ್ವಯ ತನಿಖೆ ಆರಂಭಿಸಿದ ಬಿಎಂಟಿಎಫ್ ಪೊಲೀಸರು, ಗೋಪಿ ಎಂಬಾತನನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.