ಮಳೆ ಹಾನಿಗೆ ಶಾಶ್ವತ ಪರಿಹಾರ ಕಲ್ಪಿಸಲು 300 ಕೋಟಿ ರೂ.ಯೋಜನೆ: ಕೆ.ಜೆ.ಜಾರ್ಜ್
ಬೆಂಗಳೂರು, ಸೆ.3: ನಗರದಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ಭಾಗಗಳಲ್ಲಿ ಶಾಶ್ವತ ಪರಿಹಾರ ಕಲ್ಪಿಸುವ ಸಲುವಾಗಿ 300 ಕೋಟಿ ರೂ.ಮೊತ್ತದ ಯೋಜನೆಯನ್ನು ರೂಪಿಸಿದ್ದು, ಮುಂದಿನ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಎಚ್‌ಎಸ್‌ಆರ್ ಲೇಔಟ್, ಕೋರಮಂಗಲ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆ ಹಾನಿಯಿಂದಾಗಿ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ. ಹೀಗಾಗಿ ಈ ಭಾಗದಲ್ಲಿ ಶಾಶ್ವತ ಪರಿಹಾರಕ್ಕೆ ಯೋಜನೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಆಗಸ್ಟ್‌ನಲ್ಲಿ ದಾಖಲೆಯ ಮಳೆಯಾದರೆ, ಸೆಪ್ಟಂಬರ್‌ನಲ್ಲಿ ಊಹಿಸುವುದಕ್ಕಿಂತ ಹೆಚ್ಚಿನ ಮಳೆಯಾಗಿದೆ. ಹೀಗಾಗಿ ನಗರದ ಕೆಲವು ಪ್ರದೇಶಗಳಲ್ಲಿ ಸಮಸ್ಯೆಗಳಾಗಿವೆ. ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದರು.
ಶಾಂತಿನಗರ ಡಿಫೋ ಬಳಿ ವಿಶೇಷ ನಾಲೆಯನ್ನು ನಿರ್ಮಿಸಲಾಗುವುದು. ಎಚ್‌ಎಸ್‌ಆರ್ ಲೇಔಟ್‌ನಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಲು ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಹರಿಯದಂತೆ ಕಾಮಗಾರಿ ನಡೆಸಲಾಗುವುದು. ಎಚ್‌ಎಸ್‌ಆರ್ ಲೇಔಟ್ ನೀರು ಮಡಿವಾಳ ಕೆರೆಗೆ ಹರಿದುಹೋಗುತ್ತಿದೆ.ಈ ನೀರನ್ನು ಬೇರೆಡೆಗೆ ಹರಿಸಲು ವಿಶೇಷ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಮುಂದಿನ ನಾಲ್ಕು ದಿನಗಳ ಕಾಲ ನಗರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳು ಇವೆ. ಹೀಗಾಗಿ ರಸ್ತೆಯಲ್ಲಿ ಓಡಾಡುವ ದ್ವಿಚಕ್ರ ವಾಹನ ಸವಾರರು ಎಚ್ಚರ ವಹಿಸಬೇಕು. ಕಳೆದ ಕೆಲವು ದಿನಗಳ ಹಿಂದೆ ಬಂದ ವೇಳೆಗೆ ಮ್ಯಾನ್ ಹೋಲ್‌ಗಳು ತೆರೆದುಕೊಂಡಿರುವ ಸಾಧ್ಯತೆಗಳು ಇವೆ. ಈ ಬಗ್ಗೆ ವಾಹನ ಸಾವರರು ಎಚ್ಚರಿಕೆ ಇಂದಿರಬೇಕು ಎಂದು ಮನವಿ ಮಾಡಿದರು.
ಮಳೆಯಿಂದಾಗಿ ಮುಂಬರುವ ಅನಾಹುತಗಳನ್ನು ಎದುರಿಸಲು ಬಿಬಿಎಂಪಿ ಸನ್ನದ್ಧವಾಗಿದೆ. ಕಂಟ್ರೋಲ್ ರೂಂ, ತುರ್ತು ಕಾಮಗಾರಿ ತಂಡ, ಕೆಎರ್ಸ್ಸಾಪಿ ತುಕಡಿ, ಪ್ರಕೃತಿ ವಿಕೋಪ ತಂಡಗಳು ಹಾಗೂ ಅರಣ್ಯ ಇಲಾಖೆ ಮಳೆಯ ಎಲ್ಲ ಅನಾಹುತಗಳನ್ನು ಎದುರಿಸಲು ಸನ್ನದ್ಧವಾಗಿವೆ ಎಂದು ಹೇಳಿದರು.
ರಾಜಕಾಲುವೆ ತೆರವುಗೊಳಿಸಿದ ಬಳಿಕ ಮನೆ ಕಳೆದುಕೊಂಡವರಿಗೆ ಬಿಡಿಎ ವತಿಯಿಂದ ನಿವೇಶನ ನೀಡಲಾಗುತ್ತಿದೆ. ಆದರೆ, ಹೆಚ್ಚಿನ ಮಂದಿ ನಿವೇಶನ ಪಡೆಯಲು ಮುಂದಾಗುತ್ತಿಲ್ಲ. ರಾಜಕಾಲುವೆ ಮೇಲೆ ಮನೆಗಳನ್ನು ಕಟ್ಟಿಕೊಂಡವರನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.